ಕಲುಷಿತ ನೀರಿಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ 4ಕ್ಕೆ ಏರಿಕೆ

ಭದ್ರಾವತಿ ತಾಲ್ಲೂಕು ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ತೀವ್ರವಾಗಿ ಅಸ್ವಸ್ಥಗೊಂಡು ಮತ್ತೊಬ್ಬ ವ್ಯಕ್ತಿ ಬುಧವಾರ ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ತೀವ್ರವಾಗಿ ಅಸ್ವಸ್ಥಗೊಂಡು ಮತ್ತೊಬ್ಬ ವ್ಯಕ್ತಿ ಬುಧವಾರ ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. 
ಹುಸೇನ್ ಸಾಬ್ (72) ಮೃತಪಟ್ಟ ವ್ಯಕ್ತಿಯಾಗಿದ್ದಾರೆ, ಕಲುಷಿತ ನೀರು ಕುಡಿದು ತೀವ್ರವಾಗಿ ಅಸ್ವಸ್ಥರಾಗಿದ್ದ ಹುಸೇನ್ ಅವರು ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಹೆಚ್ಒ ಡಾ.ಹನುಮಂತಪ್ಪ ಅವರು, ಗ್ರಾಮದ 10 ಮಾದರಿಗಳ ಪೈಕಿ 7 ಮಂದಿಯ ಪರೀಕ್ಷೆಗಳು ಧನಾತ್ಮಕವಾಗಿದೆ. ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾಗಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ. 
ಇದೇ ಗ್ರಾದ ವಿವಿಧ ಪ್ರದೇಶಗಳಲ್ಲಿಗೂ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಅವುಗಳ ಫಲಿತಾಂಶ ಋಣಾತ್ಮಕವಾಗಿತ್ತು. ಇದೀಗ ಗ್ರಾಮಕ್ಕೆ ಪೂರೈಕೆ ಮಾಡಲಾಗಿದ್ದ ನೀರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲು ನಿರ್ಧರಿಸಲಾಗಿದ್ದು, ಪರೀಕ್ಷೆ ಬಳಿಕ ನೀರಿನಲ್ಲಿ ಮಿಶ್ರಣಗೊಂಡಿರುವ ರಾಸಾಯನಿಕ ಯಾವುದು ಎಂಬುದು ತಿಳಿದುಬರಲಿದೆ. ಕೆಲ ಪರೀಕ್ಷೆಗಳಲ್ಲಿ ಜನರಿಗೆ ಕಾಲರಾ ಬಂದಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ. 
ಬೋರ್ ವೆಲ್ ಗಳಿಂದ ನೀರನ್ನು ಟ್ಯಾಂಕ್ ಗಳಿಗೆ ತುಂಬಿಸಿ ಗ್ರಾಮಕ್ಕೆ ನೀರನ್ನು ಪೂರೈಕೆ ಮಾಡಲಾಗಿದೆ. ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ರೂ.2 ಲಕ್ಷ ಪರಿಹಾರವನ್ನು ನೀಡಲಾಗಿದೆ ಎಂದಿದ್ದಾರೆ. 
ಪ್ರಕರಣ ಸಂಬಂಧ ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಕೆ ಮಾಡದ ಹಿನ್ನಲೆಯಲ್ಲಿ ಪಿಡಿಒ ಜಿ.ರಮೇಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಗ್ರಾಮಕ್ಕೆ ನೀರನ್ನು ಪೂರೈಕೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಸೂಚನೆ ನೀಡಿದ್ದರು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ತಾಲೂರು ಆರೋಗ್ಯ ಅಧಿಕಾರಿ ಮತ್ತು ಎಇಇ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com