ಬೆಂಗಳೂರು; ಕಸನವಹಳ್ಳಿಯ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಶನಿವಾರ ತಿಳಿದುಬಂದಿದೆ.
ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಏಜೆಂಡ್ ಆಗಿರುವ ತನ್ವೀರ್ ಖಾನ್ ಎಂಬಾತನನ್ನು ಬೆಳ್ಳಂದೂರು ಪೊಲೀಸರು ನಿನ್ನೆ ಬಂಧನಕ್ಕೊಳಪಡಿಸಿದ್ದಾರೆ.
ತನ್ವೀರ್ ಕಟ್ಟಡ ನಿರ್ಮಾಣದಲ್ಲಿ ಪಾಲುದಾರನಾಗಿದ್ದು. ಘಟನೆ ಬಳಿಕ ತಲೆಮರೆಸಿಕೊಕಂಡಿದ್ದ ತನಿಖೆ ಆರಂಭಿಸಿದ್ದ ಪೊಲೀಸರು ನಿನ್ನೆ ಈತನನ್ನು ಬಂಧನಕ್ಕೊಳಪಡಿಸಿದ್ದಾರೆ, ಮತ್ತೊಬ್ಬ ಪಾಲುದಾರ ವಾಸ್ತುಶಿಲ್ಪಿ ಕೃಷ್ಣಕಾಂತ್ ರೆಡ್ಡಿ ಪತ್ತೆಗೆ ಹುಡುಕಾಟ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಎಂಜನಿಯರ್ ಮುನಿರೆಡ್ಡಿಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಕಟ್ಟಡ ನಿರ್ಮಾಣವಾಗುತ್ತಿರುವ ವಿಚಾರ ಮುನಿರೆಡ್ಡಿಯವರಿದೆ ತಿಳಿದಿತ್ತು. ಆದರೆ, ತಲೆಕೆಡಿಸಿಕೊಳ್ಳದ ಅವರು ಯಾವುದೇ ರೀತಿಯ ತಪಾಸಣೆಗಳನ್ನು ನಡೆಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರು ಹಣವಿಲ್ಲದ ಕಾರಣ ಉಪವಾಸವಿರುವ ಪರಿಸ್ಥಿತಿ ಎಂದುರಾಗಿದೆ. ತಿನ್ನುವುದಕ್ಕೆ ಹಣವಿಲ್ಲದ ಕಾರಣ ಪರಿಹಾರ ಧನವನ್ನು ಬ್ಯಾಂಕ್ ಖಾತೆಗಳಿಗೆ ಜಮಾವಣೆ ಮಾಡುವಂತೆ ಕುಟುಂಬಸ್ಥರು ಬಿಬಿಎಂಪಿ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ದುರಂತದಲ್ಲಿ ಗಾಯಗೊಂಡಿರುವ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಇನ್ನೂ ಕೆಲ ಕುಟುಂಬಗಳು ಪರದಾಡುತ್ತಿದ್ದು, ಕೆಲ ಖಾಸಗಿ ಎನ್'ಜಿಒಗಳು ಸಹಾಯ ಹಸ್ತ ಚಾಚಿ ಗಾಯಾಳುಗಳಿಗೆ ಹಣ್ಣುಗಳನ್ನು ವಿತರಿಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.