'ಸುಪ್ರೀಂ' ಆದೇಶಕ್ಕೆ ವಿರುದ್ಧವಾಗಿ ಕರ್ನಾಟಕ ಮಹದಾಯಿ ನಾಲೆ ಕಾಮಗಾರಿ ಪುನರಾರಂಭಿಸಿದೆ: ಗೋವಾ ಆರೋಪ
ಮಹದಾಯಿ ನದಿ ನೀರು ವಿವಾದ ಕುರಿತಂತೆ ಮತ್ತೆ ಕ್ಯಾತೆ ತೆಗೆದಿರುವ ಗೋವಾ ಸರ್ಕಾರ, ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಕರ್ನಾಟಕ ಮಹದಾಯಿ (ಕಳಸಾ-ಬಂಡೂರಿ) ನಾಲೆ ಕಾಮಗಾರಿಯನ್ನು ಪುನರಾರಂಭಿಸಿದೆ ಎಂದು ಶುಕ್ರವಾರ ಆರೋಪ ಮಾಡಿದೆ...
ಬೆಂಗಳೂರು: ಮಹದಾಯಿ ನದಿ ನೀರು ವಿವಾದ ಕುರಿತಂತೆ ಮತ್ತೆ ಕ್ಯಾತೆ ತೆಗೆದಿರುವ ಗೋವಾ ಸರ್ಕಾರ, ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಕರ್ನಾಟಕ ಮಹದಾಯಿ (ಕಳಸಾ-ಬಂಡೂರಿ) ನಾಲೆ ಕಾಮಗಾರಿಯನ್ನು ಪುನರಾರಂಭಿಸಿದೆ ಎಂದು ಶುಕ್ರವಾರ ಆರೋಪ ಮಾಡಿದೆ.
ಮಹದಾಯಿ (ಕಳಸಾ-ಬಂಡೂರಿ) ನಾಲೆ ಕಾಮಗಾರಿ ಪುನರಾರಂಭಿಸಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರಗಳಿರುವುದಾಗಿ ಹೇಳಿರುವ ಗೋವಾ, ಕರ್ನಾಟಕ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ. ಇದನ್ನು ಸಾಬೀತು ಮಾಡಲು ಬಳಿ ಛಾಯಾಚಿತ್ರಗಳಿವೆ ಎಂದು ಗೋವಾ ಸರ್ಕಾರ ಹೇಳಿದೆ.
ಈ ನಡುವೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮ್ಮ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕಾಮಗಾರಿ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ್ಕೆ ಸೂಚಿಸುವಂತೆ ತಿಳಿಸಿದ್ದಾರೆ.
ಪರಿಕ್ಕರ್ ಅವರ ಸೂಚನೆಯಂತೆಯೇ ಗೋವಾ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕಾಮಗಾರಿಯನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ. ಪತ್ರದ ಕುರಿತ ಪ್ರತಿಯನ್ನು ಮಾಧ್ಯಮಗಳಿಗೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಗೋವಾ ನೀರಾವರಿ ಸಚಿವ ವಿನೋದ್ ಪಾಳ್ಯೇಕರ್ ಅವರು ಮಾತನಾಡಿ, ಮಾಧ್ಯಮ ವರದಿಗಳ ಹಿನ್ನಲೆಯಲ್ಲಿ ನಾನು ಕಣಕುಂಬಿಗೆ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ತಂಡವನ್ನು ಕಳುಹಿಸಿದ್ದೇನೆಂದು ಖಚಿತಪಡಿಸಿದ್ದಾರೆ.
ಕಣಕುಂಬಿಗೆ ಭೇಟಿ ನೀಡಿದ ಮುಖ್ಯ ಎಂಜಿನಿಯರ್ ಸಂದೀಪ ನಾಡಕರ್ಣಿ ಅವರ ತಂಡ ಸಂಜೆ ಪಣಜಿಗೆ ಆಗಮಿಲಿ ಪಾಳ್ಯೇಕರ್ ಅವರಿಗೆ ವರದಿ ಸಲ್ಲಿಸಿದೆ. ವರದಿ ಜೊತೆಗೆ ಫೋಟೋಗಳನ್ನು ಲಗತ್ತಿಸಿದ್ದು, ಕರ್ನಾಟಕದ ಕೆಲಸಗಾರರು ಕಣಕುಂಬಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಕಂಡು ಬಂದಿದೆ.
ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕರ್ನಾಟಕ ಸರ್ಕಾರ ಕಾಮಗಾರಿಯನ್ನು ಪುನರಾರಂಭಿಸಿದೆ. ಕರ್ನಾಟಕ ಸರ್ಕಾರ ನ್ಯಾಯಾಲಯದ ಆದೇಶವ್ನನು ಉಲ್ಲಂಘನೆ ಮಾಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ. ಮಹಾದಾಯಿ ನ್ಯಾಯಾಧೀಕರಣದಲ್ಲಿ ಈ ವಿಚಾರದ ವಿರುದ್ಧ ನಾವು ದನಿ ಎತ್ತುತ್ತೇವೆಂದು ಪಾಳ್ಯೇಕರ್ ಅವರು ತಿಳಿಸಿದ್ದಾರೆ.