ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯುಂಟಾಗಿದ್ದು, ಪ್ರಸ್ತುತ ಇರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಜವಾಬ್ದಾರಿಗಳನ್ನು ನೀಡಿರುವುದಾಗಿ ತಿಳಿದುಬಂದಿದೆ.
ರಾಜ್ಯದಲ್ಲಿ ಐಎಎಸ್ ಶ್ರೇಣಿ ಅಧಿಕಾರಿಗಳ ಕೊರತೆ ಶೇ.21ರಷ್ಟಿದ್ದು, ಅಧಿಕಾರಿಗಳ ಬರ ಹಿನ್ನಲೆಯಲ್ಲಿ ಇರುವ ಅಧಿಕಾರಿಗಳೇ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ. ಹೀಗಾಗಿ ಅಧಿಕಾರಿಗಳು ಸಂಕಷ್ಟದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮಾಹಿತಿ ನೀಡಿರುವ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಶೇ.21ರಷ್ಟು ಐಎಎಸ್ ಅಧಿಕಾರಿಗಳ ಕೊರತೆಯಿದ್ದು, 314 ಖಾಲಿಯಿರುವ ಹುದ್ದೆಗಳ ಪೈಕಿ 61 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು, ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಇರುವುದು ನಿಜ. ಐಎಎಸ್ ಅಧಿಕಾರಿಗಳ ಕೊರತೆಯಿರುವುದರಿಂದ ಇರುವ ಅಧಿಕಾರಿಗಳಿಗೇ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ 20 ಹಿರಿಯ ಐಎಎಸ್ ಅಧಿಕಾರಿಗಳಿಗೆ 1ಕ್ಕಿಂತಲೂ ಹೆಚ್ಚಿನ ಇಲಾಖೆಗಳ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಖಾಲಿಯಿರುವ ಹುದ್ದೆಗಳಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ನೇಮಕ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಪ್ರತೀ ವರ್ಷ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಲೇ ಇರುತ್ತದೆ. ಪ್ರಸಕ್ತ ವರ್ಷ ಕೂಡ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಹುದ್ದೆಗಳು ಪೂರ್ಣಗೊಳ್ಳದ ಕಾರಣ, ಇರುವ ಅಧಿಕಾರಿಗಳಿಗೇ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ ಡಿಪಿಎಆರ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕಾರಿಗಳ ಕೊರತೆಯನ್ನು ನಿಭಾಯಿಸುವ ಸಲುವಾಗಿ ರಾಜ್ಯ ಸರ್ಕಾರ ಅರ್ಹ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ರ್ಯಾಂಕ್ ಗಳನ್ನು ನೀಡಲು ಆರಂಭಿಸಿದೆ. ಈ ವರ್ಷ 81 ಕೆಎಎಶ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಅಧಿಕಾರಿಗಳ ಬರ ವಿದ್ದರೂ ಪ್ರತೀ ವರ್ಷ ರಾಜ್ಯಕ್ಕೆ 10-12 ಅಧಿಕಾರಿಗಳನ್ನಷ್ಟೇ ಕೇಂದ್ರ ನೇಮಕ ಮಾಡುತ್ತಿದೆ ಎಂದು ತಿಳಿಸಿದ್ದಾರೆ.