ರಾಜ್ಯ

ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೈಕೋರ್ಟ್ ಮೊರೆ ಹೋದ ಹರಿಶ್ಚಂದ್ರ ಗೌಡ

ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೈಕೋರ್ಟ್ ಮೊರೆ ಹೋದ ಹರಿಶ್ಚಂದ್ರ ಗೌಡ
ಕರ್ನಾಟಕ ಹೈಕೋರ್ಟ್ ಮತ್ತು ಒಳ ಚಿತ್ರದಲ್ಲಿ ಟಿಡಿಆರ್ ಹರಿಶ್ಚಂದ್ರ ಗೌಡ
Published On :

ಬೆಂಗಳೂರು: ಎಂದಿನಂತೆ ಪ್ರಕರಣ ವಿಚಾರಣೆಯನ್ನು ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ನಲ್ಲಿ ನಿನ್ನೆ ಒಂದು ವಿಲಕ್ಷಣ ಪ್ರಕರಣ ನ್ಯಾಯಾಧೀಶರಿಗೆ ಎದುರಾಗಿತ್ತು.
ಶಿವಮೊಗ್ಗ ಜಿಲ್ಲೆಯ ಅರವತ್ತು ವರ್ಷ ಕಳೆದಿರುವ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ವೃದ್ಧರೊಬ್ಬರು ತಮ್ಮನ್ನು ಕರ್ನಾಟಕ ಮುಖ್ಯಮಂತ್ರಿಯನ್ನಾಗಿ ಪ್ರಮಾಣವಚ ಸ್ವೀಕರಿಸಲು ಆಹ್ವಾನಿಸಲು ರಾಜ್ಯಪಾಲರಿಗೆ ಆದೇಶ ನೀಡಬೇಕೆಂದು ಕೋರಿ ಅರ್ಜಿ ಹಾಕಿದ್ದರು.

66 ವರ್ಷದ ಟಿಡಿ ಆರ್ ಹರಿಶ್ಚಂದ್ರ ಗೌಡ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುಡೂರಿನವರಾಗಿದ್ದಾರೆ. ಹಲವು ದಶಕಗಳಿಂದ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಾರೆ. ಅರ್ಜಿ ಸಲ್ಲಿಸಿ ತಾನೇ ಹೈಕೋರ್ಟ್ ಗೆ ಬಂದು ವಾದ ಮಂಡಿಸಿದ್ದ ಹರಿಶ್ಚಂದ್ರ ಗೌಡ, ತಮ್ಮ ಪ್ರಾತಿನಿಧ್ಯವನ್ನು ರಾಜ್ಯಪಾಲರು ಪರಿಗಣಿಸಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಬೇಕೆಂದು ವಾದಿಸಿದರು.

ನ್ಯಾಯಮೂರ್ತಿಗಳಾದ ಹೆಚ್ ಜಿ ರಮೇಶ್ ಮತ್ತು ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ವಲ್ಪ ಹೊತ್ತು ವಾದವನ್ನು ಆಲಿಸಿ ಅರ್ಜಿಯನ್ನು ವಜಾಗೊಳಿಸಿ, ಈ ಅರ್ಜಿಯನ್ನು ಪರಿಗಣಿಸಲು ಯಾವುದೇ ಅಂಶಗಳು ಕಂಡುಬರುವುದಿಲ್ಲ ಎಂದು ಹೇಳಿದರು. ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಹರಿಶ್ಚಂದ್ರ ಗೌಡರು ಉತ್ತರಿಸುವಾಗ ಇಡೀ ಕೋರ್ಟ್ ಸಭಾಂಗಣದಲ್ಲಿದ್ದವರು ಗೊಳ್ಳೆಂದು ನಗುತ್ತಿದ್ದರು.

ಮುಖ್ಯಮಂತ್ರಿಯಾಗಲು ನಿಮಗೆ ಶಾಸಕರ ಬೆಂಬಲ ಹೇಗೆ ಸಿಗುತ್ತದೆ ಎಂದು ನ್ಯಾಯಾಧೀಶರು ಕೇಳಿದಾಗ, ನ್ಯಾಯಾಲಯ ಆದೇಶ ನೀಡಿದರೆ ಭಿನ್ನಮತೀಯ ಕಾಂಗ್ರೆಸ್ ಶಾಸಕರು ತಮಗೆ ಬೆಂಬಲ ನೀಡುತ್ತಾರೆ. ಅದೇ ರೀತಿ ಜೆಡಿಎಸ್ ವರಿಷ್ಠ ದೇವೇಗೌಡರು ಮುಖ್ಯಮಂತ್ರಿಯಾಗಲು ಮತ್ತು ಪ್ರಧಾನ ಮಂತ್ರಿಯಾಗುವಲ್ಲಿ ತಾವು ಪ್ರಮುಖ ಪಾತ್ರ ವಹಿಸಿದ್ದು ಈ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರು ಕೂಡ ಬೆಂಬಲ ನೀಡುತ್ತಾರೆ ಎಂದರು. ಆಗ ಅಲ್ಲಿ ನೆರೆದಿದ್ದವರು ಮತ್ತಷ್ಟು ನಕ್ಕರು.

ತಾವು ಮುಖ್ಯಮಂತ್ರಿಯಾದರೆ ಈ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುತ್ತೇನೆ. ಸಂಪುಟದ ಎಲ್ಲಾ ಸಚಿವರುಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಭ್ರಷ್ಟಾಚಾರ ಸರ್ಕಾರದ ಆಡಳಿತದಲ್ಲಿ ನುಸುಳದಂತೆ ನೋಡಿಕೊಳ್ಳುವುದಾಗಿ ಹೇಳಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂತಹ ವಿಷಯಗಳನ್ನೆಲ್ಲ ನೋಡಿಕೊಳ್ಳುವುದರಿಂದ ದೇಶದ ಬಗ್ಗೆ ಚಿಂತೆಯಿಲ್ಲ, ನನ್ನದೇನಿದ್ದರೂ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಬೇಕೆಂಬುದು ಗುರಿ ಎಂದರು.

ತಾನು 42 ವರ್ಷಗಳ ಕಾಲ ಎಐಸಿಸಿ ಸದಸ್ಯರಾಗಿದ್ದು ನೆಹರೂ-ಗಾಂಧಿ ಕುಟುಂಬದ ಕಟ್ಟಾ ಅನುಯಾಯಿ ಎಂದು ಅರ್ಜಿಯಲ್ಲಿ ನಮೂದಿಸಿದ್ದ ಹರಿಶ್ಚಂದ್ರ ಗೌಡ, ಮೇ 18,21 ಮತ್ತು 22 ರಂದು ಬರೆದಿದ್ದ ಪತ್ರವನ್ನು ರಾಜ್ಯಪಾಲರು ಪರಿಗಣಿಸಲಿಲ್ಲ. ಅದರಲ್ಲಿ ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸುವಂತೆ ಅವರು ಕೋರಿದ್ದರು.

ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಯಡಿಯೂರಪ್ಪನವರನ್ನು ರಾಜ್ಯಪಾಲರು ಆಹ್ವಾನಿಸಿದ್ದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಹೇಳಿದ ಹರಿಶ್ಚಂದ್ರ ಗೌಡ, ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ ನ್ನು ಆಹ್ವಾನಿಸದೇ ಇದ್ದದ್ದು ಬೇಸರ ತಂದಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿರುವುದರಿಂದ ರಾಜ್ಯಪಾಲರು ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಬಹುದಾಗಿತ್ತು ಎಂದು ಹರಿಶ್ಚಂದ್ರ ಗೌಡ ವಾದಿಸಿದ್ದಾರೆ.

ಹರಿಶ್ಚಂದ್ರ ಗೌಡ ಅವರು ಇಂಗ್ಲಿಷ್ ನಲ್ಲಿ ಅರ್ಜಿ ಬರೆದು ಕನ್ನಡದಲ್ಲಿ ಕೋರ್ಟ್ ನಲ್ಲಿ ವಾದಿಸಲು ಅವಕಾಶ ಕೋರಿದ್ದರಿಂದ ಮುಖ್ಯ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಮತ್ತು ನ್ಯಾಯಾಧೀಶ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅವರ ಅರ್ಜಿಯನ್ನು ಮತ್ತೊಂದು ವಿಭಾಗೀಯ ಪೀಠಕ್ಕೆ ವಿಚಾರಣೆಗೆ ಉಲ್ಲೇಖಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.