ಸೈಕಲ್ ರವಿ ಯಾರು? 'ಅಂತಹವರೊಂದಿಗೆ' ನನಗೆ ಸಂಪರ್ಕವಿಲ್ಲ: ಮಾಜಿ ಸಚಿವ ಎಂಬಿ ಪಾಟಿಲ್ ಸ್ಪಷ್ಟನೆ

ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಜೊತೆಗಿನ ಸಂಪರ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಸೈಕಲ್ ರವಿಗೂ ತನಗೂ ಯಾವುದೇ ಸಂಬಂಧವಿಲ್ಲ. ಅಂತಹವರೊಂದಿಗೆ ನಾನು ಸಂಪರ್ಕವಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ಎಂಬಿ ಪಾಟೀಲ್ (ಒಳಚಿತ್ರ-ರೌಡಿ ಶೀಟರ್ ಸೈಕಲ್ ರವಿ)
ಮಾಜಿ ಸಚಿವ ಎಂಬಿ ಪಾಟೀಲ್ (ಒಳಚಿತ್ರ-ರೌಡಿ ಶೀಟರ್ ಸೈಕಲ್ ರವಿ)
ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಜೊತೆಗಿನ ಸಂಪರ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಸೈಕಲ್ ರವಿಗೂ ತನಗೂ ಯಾವುದೇ ಸಂಬಂಧವಿಲ್ಲ. ಅಂತಹವರೊಂದಿಗೆ ನಾನು ಸಂಪರ್ಕವಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ವರದಿಗೆ ಸಂಬಂಧಿಸಿದಂತೆ ಇಂದು ಖುದ್ಧು ತಾವೇ ಕರೆ ಮಾಡಿ ಮಾತನಾಡಿದ ಎಂಬಿ ಪಾಟೀಲ್ ಅವರು, ನಾನು ಸೈಕಲ್ ರವಿಗೆ ಎಂದೂ ಕರೆ ಮಾಡಿಲ್ಲ. ಆತ ಯಾರೂ ಎಂದೂ ತಿಳಿದಿಲ್ಲ. ಟಿವಿಯಲ್ಲಿ ತೋರಿಸುತ್ತಿರುವ ದೂರವಾಣಿ ಸಂಖ್ಯೆ ನನ್ನದೇ.. ಆದರೆ ನಾನು ಕರೆ ಮಾಡಿದ್ದು ಸೈಕಲ್ ರವಿಗೆ ಅಲ್ಲ. ಸಚ್ಚಿದಾನಂದ ಅವರಿಗೆ ಎಂದು ಹೇಳಿದ್ದಾರೆ.
ಎಂಬಿ ಪಾಟೀಲ್ ಅವರು ಹೇಳಿಕೊಂಡಂತೆ ಸಚ್ಚಿದಾನಂದ ಎನ್ನುವವರು ಅಂಬರೀಷ್ ಅವರ ಆಪ್ತರಾಗಿದ್ದು, ಅವರ ಮೂಲಕವೇ ತನಗೂ ಪರಿಚಯ. ನಾನು ಸಚ್ಚಿದಾನಂದ ಸ್ನೇಹಿತರಾಗಿದ್ದು, ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದೆ. ಕಳೆದ ವಾರ ಕೂಡ ಕರೆ ಮಾಡಿ ಆತನೊಂದಿಗೆ ಮಾತನಾಡಿದ್ದೇನೆ. ಇದು ಸಚ್ಚಿದಾನಂದನ ಮೊಬೈಲ್ ಸಂಖ್ಯೆಯೇ ಹೊರತು ಸೈಕಲ್ ರವಿಯದ್ದಲ್ಲ ಎಂದು ಎಂಬಿ ಪಾಟಿಲ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಕರೆ ಮಾಡಿದ್ದ ಎಂಬಿ ಪಾಟೀಲ್ ಅವರ ಆಪ್ತ ಸಚ್ಚಿದಾನಂದ ಅವರೂ ಕೂಡ ಆ ಸಂಖ್ಯೆ ನನ್ನದು. ಸುಮಾರು ವರ್ಷಗಳಿಂದ ಆ ದೂರವಾಣಿ ಸಂಖ್ಯೆಯನ್ನು ಬಳಸುತ್ತಿದ್ದೇನೆ. ಎಂಬಿ ಪಾಟೀಲ್ ಅವರು ನನಗೆ ಕರೆ ಮಾಡಿದ್ದರೇ ಹೊರತು ರೌಡಿ ಶೀಟರ್ ಗೆ ಅಲ್ಲ. ಅವರು ಸಜ್ಜನರು, ರೌಡಿಶೀಟರ್ ರಂತಹ ವ್ಯಕ್ತಿಗಳೊಂದಿಗೆ ಯಾವುದೇ ಕಾರಣಕ್ಕೂ ಸಂಪರ್ಕ ವಿಟ್ಟುಕೊಳ್ಳುವುದಿಲ್ಲ, ಅವರ ಮೇಲಿನ ಆರೋಪ ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನು ಅಪಹರಣ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇತ್ತೀಚೆಗೆ ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿಯನ್ನು ಬಂಧಿಸಿದ್ದರು. ಅಲ್ಲದೆ ಆತನಿಂದ ಸುಮಾರು 11 ಮೊಬೈಲ್ ಫೋನ್ ಗಳು ಹಾಗೂ ಸುಮಾರು 28 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದರು. ಈ 38 ಸಿಮ್ ಕಾರ್ಡ್ ಗಳ ಪೈಕಿ ಒಂದು ಸಿಮ್ ಕಾರ್ಡ್ ನಲ್ಲಿ ನಲ್ಲಿ ಎಂಬಿ ಪಾಟೀಲ್ ಅವರ ನಂಬರ್ ದಾಖಲಾಗಿತ್ತು. ಅಲ್ಲದೆ ಪಾಟೀಲ್ ನಂಬರ್ ನಿಂದ ಆ ಸಿಮ್ ಕಾರ್ಡ್ ಸುಮಾರು 80 ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು. ಅಲ್ಲದೆ 2 ಎಸ್ ಎಂಎಸ್ ಕೂಡ ರವಾನೆಯಾಗಿತ್ತು. 
ಅಂತೆಯೇ ಸೈಕಲ್ ರವಿಯದ್ದು ಎಂದು ಹೇಳಲಾಗಿರುವ ದೂರವಾಣಿ ಸಂಖ್ಯೆಗೆ ಎಂಬಿ ಪಾಟೀಲ್ ಫೋನ್ ನಂಬರ್ ನಿಂದ 24 ಬಾರಿ ಕರೆ ಬಂದಿತ್ತು ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಇದೇ ಸೈಕಲ್ ರವಿಗೆ ಖ್ಯಾತ ಹಾಸ್ಯನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗಿತ್ತು. ಆದರೆ ಸಾಧುಕೋಕಿಲ ಅವರೂ ಕೂಡ ಈ ಆರೋಪವನ್ನು ನಿರಾಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com