

ಬೆಂಗಳೂರು: ಜುಲೈ 20ರಿಂದ ದೇಶಾದ್ಯಂತ ನಡೆಸಲು ಉದ್ದೇಶಿಸಿರುವ ಸಾರಿಗೆ ಮಾಲಿಕರ ಮುಷ್ಕರವನ್ನು ಹಿಂತೆಗೆದುಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲವಾದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮಗಳನ್ನು ಕೈಗೊಂಡಿರುವುದಾಗಿ ರಾಜ್ಯ ಸಾರಿಗೆ ಇಲಾಖೆ ತಿಳಿಸಿದೆ.
ಬೆಂಗಳೂರು ಮತ್ತು ಜಿಲ್ಲಾ ಮಟ್ಟದಲ್ಲಿ ರಾಜ್ಯ ಸಾರಿಗೆ ಇಲಾಖೆ ಕಾರ್ಯಪಡೆ ಸಮಿತಿಯೊಂದನ್ನು ರಚಿಸಿದ್ದು ಪ್ರತಿ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಈ ಮೂಲಕ ಸರ್ಕಾರಿ ಅಥವಾ ಟ್ರಕ್ ನಿರ್ವಾಹಕರು ಕಾರ್ಯಪಡೆಯ ಸದಸ್ಯರನ್ನು ಸಹಾಯಕ್ಕೆ ಕರೆಯಬಹುದು. ಮುಷ್ಕರದ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಿರಲು ಸಮಿತಿ ಕಾರ್ಯವಹಿಸಲಿದೆ.
ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ಕಳೆದ ತಿಂಗಳು ಮುಷ್ಕರಕ್ಕೆ ಕರೆ ನೀಡಿದ್ದು ಇದಕ್ಕೆ ದಕ್ಷಿಣ ವಲಯ ಮೋಟಾರು ಸಾರಿಗೆ ಅಭಿವೃದ್ಧಿ ಸಂಸ್ಥೆ ಮತ್ತು ಬಸ್ ನಿರ್ವಾಹಕರ ಒಕ್ಕೂಟ ಬೆಂಬಲ ಸೂಚಿಸಿವೆ.