
ಬಳ್ಳಾರಿ: ಜಿಲ್ಲಾ ಸೇನಾ ಮೀಸಲು ಪೊಲೀಸ್ ಕೇಂದ್ರ ಕಚೇರಿ ಆವರಣದಲ್ಲಿ ಅಗ್ನಿ ಅವಘಡವುಂಟಾಗಿ ಅದೇ ಕಚೇರಿಯ ಪೊಲೀಸರನ್ನು ಮುಜುಗರಕ್ಕೀಡುಮಾಡಿದ ಪ್ರಸಂಗ ನಡೆದಿದೆ.
ಮೊನ್ನೆ ಬುಧವಾರ ಸಂಜೆ ಜಿಲ್ಲಾ ಸೇನಾ ಮೀಸಲು ಕಚೇರಿ ಆವರಣದಲ್ಲಿ ಬೆಂಕಿ ಅವಘಡ ಉಂಟಾಯಿತು. ಅಗ್ನಿಶಾಮಕ ದಳವನ್ನು ಬರಲು ಹೇಳಬೇಕಾಗಿತ್ತು. ಅಗ್ನಿ ಅವಘಡದಿಂದ ಸಾರ್ವಜನಿಕ ಆಸ್ತಿಪಾಸ್ತಿ ನಾಶದಿಂದ ಅಲ್ಲಿನ ಅಧಿಕಾರಿಗಳ ಮಧ್ಯೆ ಕಲಹವೇರ್ಪಟ್ಟಿತ್ತು. ಅಷ್ಟಕ್ಕೂ ಬೆಂಕಿ ಹತ್ತಿ ಉರಿಯಲು ಕಾರಣ ಅದೇ ಕಚೇರಿಯ ಸಬ್ ಇನ್ಸ್ ಪೆಕ್ಟರ್ ಮಹಿಳೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ.
ಈ ಮಹಿಳೆ ಕಾನ್ಸ್ಟೇಬಲ್ ವೊಬ್ಬರ ಪತ್ನಿ. ಸಬ್ ಇನ್ಸ್ ಪೆಕ್ಟರ್ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಇಬ್ಬರ ಮಧ್ಯೆ ಆ ದಿನ ಜಗಳವಾಗಿ ಅಲ್ಲಿ ಬೆಂಕಿ ಹತ್ತಿ ಉರಿದಿದೆ. ಸರ್ದಾರ್, ಮೀಸಲು ಪಡೆ ಕಚೇರಿಯ ಅಧಿಕಾರಿಯ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ಕಚೇರಿಯ ಅತಿಥಿ ಗೃಹದಲ್ಲಿ ಇವರಿಬ್ಬರು ಜಗಳ ಮಾಡುತ್ತಿರುವುದು ಇದು ಮೊದಲ ಸಲವೇನಲ್ಲ. ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿಯೇ ಜಗಳ ಮಾಡಿಕೊಂಡಿದ್ದಾರೆ. ಅತಿಥಿ ಗೃಹದ ಮೇಲೆ ಮಹಿಳೆ ಕಲ್ಲು ಎಸೆದ ಪ್ರಕರಣ ಕೂಡ ನಡೆದಿದೆ. ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ಕೊಟ್ಟೂರಿನವರಾದ ಸಬ್ ಇನ್ಸ್ ಪೆಕ್ಟರ್ ಮತ್ತು ಮಹಿಳೆ ಒಟ್ಟಿಗೇ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು. ಪರಸ್ಪರ ಪ್ರೀತಿಸುತ್ತಿದ್ದರೂ ಮದುವೆ ಮಾಡಿಕೊಳ್ಳಲಾಗದೆ ಬೇರೆಯವರನ್ನು ಮದುವೆ ಮಾಡಿಕೊಂಡರು. ಆದರೆ ಆಗಾಗ ಭೇಟಿ ಸಂಬಂಧವನ್ನು ಮುಂದುವರಿಸಿದ್ದರು.
ಮಹಿಳೆಯ ಪತಿ ಕರ್ತವ್ಯದ ಮೇಲೆ ಹೊರಗೆ ಹೋಗಿದ್ದಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಹಲವರಿಗೆ ಅವರ ಸಂಬಂಧದ ಬಗ್ಗೆ ಚೆನ್ನಾಗಿ ತಿಳಿದಿತ್ತು. ಗೋವಾ ಮತ್ತಿತರ ಸ್ಥಳಗಳಿಗೆ ಇಬ್ಬರೂ ಹೋಗುತ್ತಿದ್ದರು. ಈ ವಿಷಯ ಮಹಿಳೆ ಪತಿ ಕಾನ್ಸ್ಟೇಬಲ್ ಗೆ ಗೊತ್ತಾಗಿ ಮೇಲಾಧಿಕಾರಿಗಳಿಗೆ ಹೇಳುತ್ತೇನೆಂದು ಎಚ್ಚರಿಸಿದ್ದಾಗ ಎಸ್ ಐ ಜೀವಬೆದರಿಕೆ ಹಾಕಿದ್ದರು ಎನ್ನುತ್ತಾರೆ ಮತ್ತೊಬ್ಬ ಪೊಲೀಸ್ ಅಧಿಕಾರಿ.
Advertisement