ಅಬಕಾರಿ ಅಧಿಕಾರಿ ಸೋಗಿನಲ್ಲಿದ್ದ ಕುಖ್ಯಾತ ಕಳ್ಳನನ್ನು ಹಿಡಿದ ಪೊಲೀಸರು!

ತಾನು ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆ ಅಧಿಕಾರಿ ಎಂದು ಯುವತಿಯ ನಂಬಿಸಿ ಆಕೆಯ ಮೊಬೈಲ್ ಮತ್ತು ಚಿನ್ನದ ಸರ ಎಗರಿಸಿದ್ದ ಕುಖ್ಯಾತ ಕಳ್ಳನೋರ್ವನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಮೊಹಮದ್ ಷಾಜಿ ಶೇಖ್
ಆರೋಪಿ ಮೊಹಮದ್ ಷಾಜಿ ಶೇಖ್
ಬೆಂಗಳೂರು: ತಾನು ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆ ಅಧಿಕಾರಿ ಎಂದು ಯುವತಿಯ ನಂಬಿಸಿ ಆಕೆಯ ಮೊಬೈಲ್ ಮತ್ತು ಚಿನ್ನದ ಸರ ಎಗರಿಸಿದ್ದ ಕುಖ್ಯಾತ ಕಳ್ಳನೋರ್ವನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಪರಪ್ಪನ ಅಗ್ರಹಾರದ ಅಬ್ದುಲ್ ಮುಬಾರಕ್ ಅಲಿಯಾಸ್ ಮೊಹಮದ್ ಷಾಜಿ ಶೇಖ್ ಪೊಲೀಸರು ಬಂಧಿಸಿದ್ದು, ಆತನಿಂದ  28 ಗ್ರಾಂನ ಚಿನ್ನದ ಸರ, ಐಫೋನ್, ಪೊಲೀಸ್ ಸಮವಸ್ತ್ರದಲ್ಲಿರುವ ಆರೋಪಿಯ ಫೋಟೊಗಳು, ನಕಲಿ ಗುರುತಿನ ಚೀಟಿ ಹಾಗೂ ಫೋರ್ಡ್ ಕಾರನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಸ್ಸಿನಲ್ಲಿ ತೆರಳುತ್ತಿದ್ದಾಗ ತಾನು ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆ ಅಧಿಕಾರಿ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ ಮೆಕ್ಯಾನಿಕ್‌ ಮೊಹಮದ್ ಷಾಜಿ ಶೇಖ್ ಯುವತಿಯೊಂದಿಗೆ ಪರಿಚಯ ಮಾಡಿಕೊಂಡಿದ್ದ. ಪರಿಚಯದ ದಿನವೇ ಯುವತಿಯಿಂದ ಆಕೆ ಮೊಬೈಲ್ ನಂಬರ್ ಪಡೆದಿದ್ದ ಶೇಖ್ ಬಳಿಕ ಆಕೆಗೆ ಪ್ರೇಮ ನಿವೇದನೆ ಕೂಡ ಮಾಡಿದ್ದ. ಶೇಖ್ ಬಳಿಯಿದ್ದ ಅಬಕಾರಿ ಇಲಾಖೆ ಗುರುತಿನ ಚೀಟಿ ನೋಡಿದ್ದ ಯುವತಿ ಆತನನ್ನು ನಂಬಿ, ಆತನ ಪೀತಿಗೆ ಓಕೆ ಎಂದಿದ್ದಳು. ಆರೋಪಿಯು ಇದೇ ಫೆಬ್ರವರಿ 2ರಂದು ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್‌ನಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಪ್ರಯಾಣಿಸುತ್ತಿದ್ದ. ಯುವತಿಯೊಬ್ಬಳ ಪಕ್ಕದಲ್ಲೇ ಕುಳಿತಿದ್ದ ಆತ, ಆಕೆಗೆ ಕಾಣಿಸುವಂತೆ ಪದೇ ಪದೇ ಗುರುತಿನ ಚೀಟಿ ತೆಗೆದು ನೋಡುತ್ತಿದ್ದ. ಅದನ್ನು ನೋಡಿ 'ಪೊಲೀಸ್ ಅಧಿಕಾರಿ' ಇರಬಹುದೆಂದು ಭಾವಿಸಿದ ಯುವತಿ, ತಾನೇ ಆತನನ್ನು ಮಾತನಾಡಿಸಿದ್ದಳು. ಆಗ ಆತ, 'ನಾನು ತೆಲಂಗಾಣದ ಅಧಿಕಾರಿ ಮೊಹಮದ್ ಷಾಜಿ ಶೇಖ್' ಎಂದು ಪರಿಚಯಿಸಿಕೊಂಡಿದ್ದ. ಇದೇ ವೇಳೆ ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು.
ನಾಲ್ಕೈದು ದಿನಗಳ ಮಾತುಕತೆ ಬಳಿಕ ಯುವತಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡ ಆರೋಪಿ, ಮದುವೆ ಆಗುವುದಾಗಿಯೂ ಹೇಳಿದ್ದ. ಆ ಮಾತುಗಳನ್ನು ನಂಬಿದ ಆಕೆ, ಫೆಬ್ರವರಿ 8ರಂದು ಡಿವಿಜಿ ರಸ್ತೆಯ 'ನಾಕೋಡ ಜ್ಯುವೆಲರ್ಸ್‌' ಬಳಿ ಆತನನ್ನು ಪುನಃ ಭೇಟಿಯಾಗಿದ್ದಳು. 'ಪ್ರೇಮಿಗಳ ದಿನಾಚರಣೆಗೆ ಉಡುಗೊರೆ ಕೊಡಿಸುತ್ತೇನೆ ಬಾ' ಎಂದು ಮಳಿಗೆಗೆ ಕರೆದುಕೊಂಡು ಹೋದ ಮುಬಾರಕ್, ಕೆಲ ಒಡವೆಗಳನ್ನು ಆಕೆಗೆ ತೋರಿಸಿದ್ದ. ಕೊನೆಗೆ, ವಿನ್ಯಾಸ ಚೆನ್ನಾಗಿಲ್ಲ ಎಂದು ಸಬೂಬು ಹೇಳಿ ಒಡವೆ ಕೊಡಿಸದೆ ವಾಪಸ್ ಕರೆದುಕೊಂಡು ಬಂದಿದ್ದ.
ಭೇಟಿಯಾದ ದಿನವೇ ದೊಡ್ಡ ಮೊತ್ತದ ಉಡುಗೊರೆ ಕೊಡಿಸಲು ಮುಂದಾದ ಪ್ರಿಯಕರನ ಮೇಲೆ ಯುವತಿಗೆ ಪ್ರೀತಿ ಮತ್ತಷ್ಟು ಹೆಚ್ಚಾಗಿತ್ತು. ಫೆ.10ರಂದು ಮತ್ತೆ ಕರೆ ಮಾಡಿ ಆಕೆಯನ್ನು ಅದೇ ಮಳಿಗೆಗೆ ಕರೆಸಿಕೊಂಡ ಆರೋಪಿ, ಒಂದು ಸರವನ್ನು ಆಯ್ಕೆ ಮಾಡಿ ಆಕೆಗೆ ಕೊಟ್ಟಿದ್ದ. ಬಳಿಕ ತಾನೂ ಒಂದು ಸರವನ್ನು ಕುತ್ತಿಗೆಗೆ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಟ್ರಯಲ್ ನೋಡುತ್ತಿದ್ದ. ಬಳಿಕ, ‘ಸೆಲ್ಫಿ ತೆಗೆದುಕೊಳ್ಳುತ್ತೇನೆ. ನಿನ್ನ ಮೊಬೈಲ್ ಕೊಡು’ ಎಂದು ಹೇಳಿ ಯುವತಿಯಿಂದ ಐಫೋನನ್ನೂ ಪಡೆದುಕೊಂಡ.ಯುವತಿ ಹಾಗೂ ಮಳಿಗೆಯ ನೌಕರರ ಗಮನ ಬೇರೆ ಕಡೆ ಹೋಗುತ್ತಿದ್ದಂತೆಯೇ ಮುಬಾರಕ್ ಮಳಿಗೆಯಿಂದ ಕಾಲ್ಕಿತ್ತಿದ್ದ. ಅನುಮಾನಗೊಂಡ ಯುವತಿ, ಮಳಿಗೆಯ ದೂರವಾಣಿಯಿಂದಲೇ ತನ್ನ ಮೊಬೈಲ್‌ಗೆ ಕರೆ ಮಾಡಿದ್ದಳು. ಅಷ್ಟರಲ್ಲೇ ಅದು ಸ್ವಿಚ್ಡ್‌ಆಫ್ ಆಗಿತ್ತು.
'ಯಾರೋ ಅಪರಿಚಿತ ನನ್ನ ಮೊಬೈಲ್ ಕಿತ್ತುಕೊಂಡ ಹೋದ' ಎಂದು ಮಳಿಗೆ ನೌಕರರಿಗೆ ದೂರಿದ್ದಳು. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಆತ 28 ಗ್ರಾಂನ ಸರವನ್ನೂ ಕದ್ದೊಯ್ದಿರುವುದು ಗೊತ್ತಾಗಿತ್ತು. ಈ ಸಂಬಂಧ ಮಳಿಗೆ ವ್ಯವಸ್ಥಾಪಕ ಶೇಷರಾಮ್ ಬಸವನಗುಡಿ ಠಾಣೆಗೆ ದೂರು ಕೊಟ್ಟಿದ್ದರು. 'ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ. ಖರ್ಚಿಗೂ ಹಣ ಇಲ್ಲದಂತಾಗಿತ್ತು. ಹೀಗಾಗಿ, ಸರ ದೋಚಿದ್ದೆ' ಎಂದು ಆರೋಪಿ ಹೇಳಿಕೆ ‌ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.
ಸೆಕ್ಯುರಿಟಿ ಗಾರ್ಡ್ ಹಿಡಿದಿದ್ದ!
‘ಎರಡು ವರ್ಷಗಳ ಹಿಂದೆ ಮುಂಬೈನಲ್ಲೂ ಇದೇ ರೀತಿ ಯುವತಿಯೊಬ್ಬರಿಗೆ ವಂಚಿಸಿದ್ದ. ಒಡವೆ ದೋಚಿ ಪರಾರಿಯಾಗುತ್ತಿದ್ದ ಈತನನ್ನು ಆಭರಣ ಮಳಿಗೆಯ ಸೆಕ್ಯುರಿಟಿ ಗಾರ್ಡ್ ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದರು. ನ್ಯಾಯಾಲಯದಲ್ಲಿ ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಮೆಕ್ಯಾನಿಕ್ ಆಗಿರುವ ಈತ, ತನ್ನ ಕಾರಿನ ನೋಂದಣಿ ಫಲಕದಲ್ಲಿ ಮೂರು ನಕ್ಷತ್ರ, ಅಶೋಕ ಸ್ತಂಭ ಹಾಗೂ ಖಡ್ಗದ ಚಿಹ್ನೆಗಳನ್ನು ಅಂಟಿಸಿ ಸರ್ಕಾರಿ ಅಧಿಕಾರಿ ಎಂದು ಬರೆಸಿಕೊಂಡಿದ್ದ. ಸದ್ಯ ನಗರದಲ್ಲಿ ಒಂದು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಇದೇ ರೀತಿ ಹಲವರಿಗೆ ವಂಚಿಸಿರುವ ಅನುಮಾನ ವ್ಯಕ್ತವಾಗಿರುವ ಕಾರಣ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com