ಶಿವಮೊಗ್ಗ: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶಿವಮೊಗ್ಗದಲ್ಲಿ ಭಾನುವಾರ ನಡೆದಿದೆ.
ಶಿವಮೊಗ್ಗದ ತಮ್ಮಡಿಹಳ್ಳಿ ಗ್ರಾಮದ ಜಂಗ್ಲಿ ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸ್ಥಳೀಯರು ತಿಳಿಸಿರುವಂತೆ ಗ್ರಾಮದ ನಿವಾಸಿಗಳಾದ ವಸಂತ್, ಚಿರಂತ್, ಅಜಯ್ ಮೃತಪಟ್ಟವರು ಎಂದು ತಿಳಿದುಬಂದಿದೆ.
ಭಾನುವಾರ ಮೂವರೂ ಬಾಲಕರು ಕೆರೆಗೆ ಈಜಾಡಲು ಹೋಗಿದ್ದರು. ಜೋರಾಗಿ ಮಳೆ ಬಂದಿದ್ದರಿಂದ ಕೆರೆಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಆಳ ತಿಳಿಯದೆ ಕೆರೆಗೆ ಇಳಿದ ಬಾಲಕರು ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೇ ತಮ್ಮಡಿಹಳ್ಳಿ ಗ್ರಾಮದಲ್ಲಿ ಮದುವೆ ಇದ್ದ ಕಾರಣ ಊರಿನ ಜನರು ಅಲ್ಲಿ ಸೇರಿದ್ದರು. ಹೀಗಾಗಿ ಬಾಲಕರ ರಕ್ಷಣೆಗೆ ಯಾರೂ ಇರಲಿಲ್ಲ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.