ಖಾಲಿ ಸೀಟುಗಳು: 75 ಇಂಜಿನಿಯರಿಂಗ್ ಕೋರ್ಸ್ ಸ್ಥಗಿತಕ್ಕೆ ಕಾಲೇಜುಗಳು ಮುಂದು

ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಹೀಗಾಗಿ ರಾಜ್ಯದಲ್ಲಿರುವ 35ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಸ್ವಯಂಪ್ರೇರಿತವಾಗಿ 75 ಕೋರ್ಸ್ ಗಳನ್ನು ಸ್ಥಗಿತಗೊಳಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಹೀಗಾಗಿ ರಾಜ್ಯದಲ್ಲಿರುವ 35ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಸ್ವಯಂಪ್ರೇರಿತವಾಗಿ 75 ಕೋರ್ಸ್ ಗಳನ್ನು ಸ್ಥಗಿತಗೊಳಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ. 
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನೀಡಿರುವ ಮಾಹಿತಿಗಳ ಪ್ರಕಾರ, ಬೆಂಗಳೂರಿನ ಆರ್'ವಿ ಇಂಜಿನಿಯರಿಂಗ್ ಕಾಲೇಜು ಮತ್ತು ಬಿಎಂಎಸ್ ಇಂಜಿನಿಯರ್ ಕಾಲೇಜು ಸೇರಿದಂತೆ 35ಕ್ಕೂ ಹೆಚ್ಚು ಕಾಲೇಜುಗಳು 75 ಇಂಜಿನಿಯರಿಂಗ್ ಕೋರ್ಸ್ ಗಳ ಸ್ಥಗಿತಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದವು. ಈ ಮನವಿಗೆ ಇದೀಗ ಎಐಸಿಟಿಇ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. 
ಕಾಲೇಜುಗಳು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗಳ ವಕ್ತಾರರು ನೀಡಿರುವ ಮಾಹಿತಿಗಳ ಪ್ರಕಾರ, ಕೆಲ ಕೋರ್ಸ್ ಗಳಿಂದ ಕಾಲೇಜುಗಳಿಗೆ ಸಮಸ್ಯೆಗಳುಂಟಾಗುತ್ತಿದ್ದು, ಈ ಕೋರ್ಸ್ ಗಳಿಂದ ಕಾಲೇಜುಗಳಿಗೆ ಹೊರೆಯಾಗುತ್ತಿವೆ, ಹೀಗಾಗಿ ಅಂತಹ ಕೋರ್ಸ್ ಗಳನ್ನೇ ಸ್ಥಗಿತಗೊಳಿಸಲು ತೀರ್ಮಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಇನ್ನು ಕೆಲ ಕಾಲೇಜುಗಳು ಸ್ನಾತಕೋತ್ತರ ಪದವಿಯ ಕೋರ್ಸ್ ಗಳನ್ನೇ ಸ್ಥಗಿತಗೊಳಿಸಿವೆ. ಆರ್'ವಿ ಇಂಜಿನಿಯರಿಂಗ್ ಕಾಲೇಜು ಡಿಜಿಟಲ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಕೋರ್ಸ್'ನ್ನು ಸ್ಥಗಿತಗೊಳಿಸಿದೆ. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಕೋರ್ಸ್'ನ್ನು ಸ್ಥಗಿತಗೊಳಿಸಿದೆ. ಆಚಾರ್ಯ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎರಡು ಸ್ನಾತಕೋತ್ತರ ಪದವಿಯ ಕೋರ್ಸ್'ಗಳನ್ನು ಸ್ಥಗಿತಗೊಳಿಸಿದೆ. ದಯಾನಂದ ಸಾಗರ್ ಇಂಜಿನಿಯರಿಂಗ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್, ಮಾಸ್ಟರ್ಸ್ ಇನ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್'ಮೆಂಟ್, ಬಯೋಮೆಡಿಕಲ್ ಸಿಗ್ನಲ್ ಪ್ರಾಸೆಸಿಂಗ್ ಮತ್ತು ಇನ್ಟ್ರುಮೆಂಟೇಷನ್ ಆ್ಯಂಡ್ ಬಯೋ-ಇನ್ಫಾರ್ಮಟಿಕ್ಸ್ ಕೋರ್ಸ್ ಗಳನ್ನು ಸ್ಥಗಿತಗೊಳಿಸಿದೆ. ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಕೋರ್ಸ್'ಗಳನ್ನು ಸ್ಥಗಿತಗೊಳಿಸಿದೆ. 
ನಗರದ ಉನ್ನತ ಮಟ್ಟದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಮಾತನಾಡಿ, ಕೋರ್ಸ್ ಗಳ ಕುರಿತ ಬೇಡಿಕೆಗಳು ಕಡಿಮೆಯಾಗಿದ್ದರಿಂದಾಗಿ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಆ್ಯಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಕೆಲವರಷ್ಟೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ಬೇಡಿಕೆಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. 
ಉನ್ನತ ಕಾಲೇಜುಗಳೂ ಕೂಡ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್'ಗಳಲ್ಲಿ 180 ಸೀಟುಗಳನ್ನು ಭರ್ತಿ ಮಾಡಲು ಶ್ರಮ ಪಡುತ್ತಿವೆ. ಭಾರತದಲ್ಲಿಂದು ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವುದೇ ಇದಕ್ಕೆ ಕಾರಣ ಎಂದು ಮತ್ತೊಂದು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com