ಸುನಾಮಿ ಕಿಟ್ಟಿ ಅಪಹರಣ ಪ್ರಕರಣ: ಸಪ್ಲೈಯರ್ ಗಿರೀಶ್ ದೂರಿನಲ್ಲೇನಿದೆ?

ನಟ ಸುನಾಮಿ ಕಿಟ್ಟಿ ಅಪಹರಣ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಕಿಟ್ಟಿ ತನ್ನ ಸ್ನೇಹಿತ ಸುನಿಲ್ ನ ಪತ್ನಿಯ ಸಮಸ್ಯೆ ನೀಗಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಟ ಸುನಾಮಿ ಕಿಟ್ಟಿ ಅಪಹರಣ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಕಿಟ್ಟಿ ತನ್ನ ಸ್ನೇಹಿತ ಸುನಿಲ್ ನ ಪತ್ನಿಯ ಸಮಸ್ಯೆ ನೀಗಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗುತ್ತಿದೆ.
ಹಾಗಾದರೆ ಸಂತ್ರಸ್ತ ಸುನಿಲ್ ನೀಡಿರುವ ದೂರಿನಲ್ಲೇನಿದೆ...
ದೂರಿನ ವಿವರ: ‘ರೆಸ್ಟೊರೆಂಟ್‌ಗೆ ಬಂದಿದ್ದ ಮಹಿಳೆ ಹಾಗೂ ತೌಸಿತ್‌, ಬಿಯರ್‌ ಹಾಗೂ ಹೆರಿಟೇಜ್ ವೈನ್‌ ತರಿಸಿಕೊಂಡು ಕುಡಿದಿದ್ದರು. ನಂತರ ಅರ್ಧ ಊಟ ಮಾಡಿ ಬಿಲ್ ಕೊಡುವುದಾಗಿ ಹೇಳಿ ಅರ್ಧಕ್ಕೆ ಎದ್ದು ಹೋಗಿದ್ದರು. ಎರಡು ಗಂಟೆಯಾದರೂ ವಾಪಸ್‌ ಬಾರದಿದ್ದಾಗ, ಅವರ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದ್ದೆ. ಮರುದಿನ ಬಂದು ಕೊಡುವುದಾಗಿ ಹೇಳಿದ್ದರು’ ಎಂದು ಗಿರೀಶ್‌ ದೂರಿನಲ್ಲಿ ಬರೆದಿದ್ದಾರೆ. ‘ತಡರಾತ್ರಿ ಕರೆ ಮಾಡಿದ್ದ ತೌಸಿತ್, ‘ಮಹಿಳೆ ಜತೆ ಊಟಕ್ಕೆ ಬಂದ ವಿಷಯ ಅವರ ಪತಿಗೆ ಗೊತ್ತಾಗಿದೆ. ಅವರಿಗೆ ನಿನ್ನ ಮೊಬೈಲ್ ನಂಬರ್‌ ಕೊಟ್ಟಿದ್ದೇನೆ. ಕರೆ ಮಾಡಿದರೆ, ಸುಮ್ಮನೆ ಊಟಕ್ಕೆ ಬಂದಿದ್ದರೆಂದು ಹೇಳು’ ಎಂದಿದ್ದರು. ಗಾಬರಿಗೊಂಡ ನಾನು, ಮೊಬೈಲ್‌ಗೆ ಬಂದ ಯಾವುದೇ ಕರೆ ಸ್ವೀಕರಿಸಲಿಲ್ಲ.’ ‘ನನ್ನಿಂದ ಸಾಲ ಪಡೆದಿದ್ದ ವ್ಯಕ್ತಿಯಿಂದ ಹಣ ಪಡೆಯುವುದಕ್ಕಾಗಿ ದೊಡ್ಡಬಸ್ತಿ ಮುಖ್ಯರಸ್ತೆಯ ಭುವನೇಶ್ವರಿ ನಗರದಲ್ಲಿರುವ ಕೋಳಿ ಮಾಂಸ ಮಾರಾಟ ಮಳಿಗೆಗೆ ಫೆ. 28ರಂದು ಹೋಗಿದೆ.
ಹಣ ಪಡೆದು ವಾಪಸ್‌ ಬೈಕ್‌ನಲ್ಲಿ ರೆಸ್ಟೋರೆಂಟ್‌ಗೆ ಬರುತ್ತಿದ್ದಾಗ ಅಡ್ಡಗಟ್ಟಿದ್ದ 8 ಮಂದಿ, ‘ಪೊಲೀಸರು ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಬಾ’ ಎಂದು ಹೇಳಿ ಒತ್ತಾಯದಿಂದ ಕಾರಿನಲ್ಲಿ ಕೂರಿಸಿದ್ದರು. ಅಲ್ಲಿ ಸುನಾಮಿ ಕಿಟ್ಟಿ ಇದ್ದರು. ಟಿ.ವಿಯಲ್ಲಿ ನೋಡಿದ್ದರಿಂದ ಬೇಗನೇ ಗುರುತು ಹಿಡಿದೆ. ನಂತರ, ಹೊರಮಾವು ಬಳಿಯ ತೋಟದ ಮನೆಯೊಂದಕ್ಕೆ ಕರೆದೊಯ್ದರು’ ‘ಅಲ್ಲಿ ಸುನೀಲ್‌ರನ್ನು ತೋರಿಸಿದ್ದ ಕಿಟ್ಟಿ, ‘ಮಹಿಳೆಯ ಪತಿ ಇವರು. ಆಕೆಯ ಜತೆ ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿಯಾ’ ಎಂದು ಹೇಳಿ ಹಲ್ಲೆ ಮಾಡಿದರು. ನಾನು, ‘ಯಾರೊಂದಿಗೆ ಸಂಬಂಧವಿಟ್ಟುಕೊಂಡಿಲ್ಲ’ ಎಂದೆ. ಫೋಟೊ ತೋರಿಸಿದ್ದ ಕಿಟ್ಟಿ, ‘ಇವರೇ ಆ ಮಹಿಳೆ’ ಎಂದಿದ್ದರು. ನಾನು, ‘ಹೌದು. ಇವರನ್ನು ನೋಡಿದ್ದೇನೆ. ತೌಸಿತ್‌ ಎಂಬುವರ ಜತೆ ಬರುತ್ತಿದ್ದರು’ ಎಂದೆ. ಆಗ, ‘ತೌಸಿತ್‌ನನ್ನು ಕರೆಸು’ ಎಂದು ಒತ್ತಾಯಿಸಿದ್ದರು. ‘ರೆಸ್ಟೊರೆಂಟ್‌ ಬಳಿ ಹೋದರೆ, ಅವರನ್ನು ಕರೆಸುತ್ತೇನೆ’ ಎಂದಿದ್ದೆ’ ‘ಕಿಟ್ಟಿ ಹಾಗೂ ಆತನ ಸ್ನೇಹಿತರು, ಎರಡು ಕಾರುಗಳಲ್ಲಿ ರಾತ್ರಿ 9.30 ಗಂಟೆಗೆ ಮರಿಯಪ್ಪಪಾಳ್ಯದ ಪಿ.ವಿ.ಪಿ ಕಾಲೇಜು ಬಳಿ ನನ್ನನ್ನು ಕರೆದೊಯ್ದರು. ಅಲ್ಲಿಂದಲೇ ತೌಸಿತ್‌ಗೆ ಕರೆ ಮಾಡಿಸಿ, ಗೊರಗುಂಟೆಪಾಳ್ಯದ ಸಿಗ್ನಲ್‌ ಹತ್ತಿರ ಬರುವಂತೆ ಹೇಳಿಸಿದರು.
ಆ ಸ್ಥಳಕ್ಕೆ ಹೋಗುತ್ತಿದ್ದಾಗಲೇ ನನ್ನ ಹಣೆಗೆ ಪಿಸ್ತೂಲ್‌ ಹಿಡಿದಿದ್ದ ಆರೋಪಿ, ‘ಬಹಳ ನಖರಾ ಮಾಡಿದರೆ ಸುಟ್ಟು ಬಿಡುತ್ತೇನೆ’ ಎಂದು ಹೆದರಿಸಿದ್ದ. ಗೊರಗುಂಟೆಪಾಳ್ಯದ ಸಿಗ್ನಲ್‌ ಬಳಿಯ ಫುಟ್‌ಪಾತ್‌ನಲ್ಲಿ ನಿಂತಿದ್ದ ತೌಸಿತ್‌ ಬಳಿ ಹೋದ ಆರೋ‍ಪಿಗಳು, ಮನ ಬಂದಂತೆ ಹಲ್ಲೆ ನಡೆಸಿ ಕಾರಿನಲ್ಲಿ ಕೂರಿಸಿಕೊಂಡು ಪುನಃ ತೋಟದ ಮನೆಗೆ ಕರೆದೊಯ್ದಿದ್ದರು. ತೌಸಿತ್‌ರ ಎದೆ ಹಾಗೂ ಕೈಗಳಿಗೆ ಚಾಕುವಿನಿಂದ ಚುಚ್ಚಿ ಚಿತ್ರಹಿಂಸೆ ನೀಡಿದರು. ಪಿಸ್ತೂಲ್‌ ತೋರಿಸಿ ಕೊಲೆ ಮಾಡುವುದಾಗಿ ಹೆದರಿಸಿದರು. ಕಿಟ್ಟಿ, ‘ಮಹಿಳೆಯು ನಿನಗೆ ಗೊತ್ತಾ’ ಎಂದು ತೌಸಿತ್‌ರನ್ನು ಕೇಳಿದ್ದರು. ಅವರು, ‘ಗೊತ್ತು. ಆಕೆ ನನ್ನ ಸ್ನೇಹಿತೆ. ಮದುವೆಯಾದ ವಿಷಯ ಗೊತ್ತಿರಲಿಲ್ಲ’ ಎಂದರು. ಅದಾದ ನಂತರವೂ ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ₹10 ಸಾವಿರ ನಗದು, ಮೊಬೈಲ್‌, ಎಟಿಎಂ ಕಾರ್ಡ್‌ ಕಿತ್ತುಕೊಂಡ ಕಳುಹಿಸಿದರು’ ಎಂದು ಗಿರೀಶ್‌ ದೂರಿನಲ್ಲಿ ವಿವರಿಸಿದ್ದಾರೆ.
ವಿಧಾನ ಪರಿಷತ್‌ ಸದಸ್ಯರ ಸಂಬಂಧಿ
‘ಪ್ರಕರಣದ ಆರೋಪಿ ಸುನೀಲ್‌ ನಾಪತ್ತೆಯಾಗಿದ್ದಾರೆ. ಅವರು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯರೊಬ್ಬರ ಸಂಬಂಧಿ ಎಂಬುದು ಗೊತ್ತಾಗಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.
‘ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ. ಸುನೀಲ್‌ ಅವರ ಫೇಸ್‌ಬುಕ್‌ ಖಾತೆ ಪರಿಶೀಲಿಸಿದ್ದೆವು. ಕೆಲ ರಾಜಕೀಯ ಮುಖಂಡರ ಜತೆಯಲ್ಲಿ ತೆಗೆಸಿಕೊಂಡಿದ್ದ ಫೋಟೊಗಳು ದೊರೆತಿವೆ. ಸಂಬಂಧಿಕರು ಹಾಗೂ ಸ್ನೇಹಿತರಿಂದ ಮಾಹಿತಿ ಕಲೆಹಾಕುತ್ತಿದ್ದೇವೆ. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್‌ ಅವರ ಬಳಿ ಇರುವ ಅನುಮಾನವಿದೆ. ಬಂಧನದ ಬಳಿಕವೇ ಆ ಪಿಸ್ತೂಲ್ ಯಾವುದು ಎಂಬುದು ತಿಳಿಯಲಿದೆ’ ಎಂದರು.
ನಗರ ತೊರೆದಿರುವ ತೌಸಿತ್‌
‘ಘಟನೆಯಿಂದ ಭಯಗೊಂಡಿರುವ ತೌಸಿತ್‌, ಬೆಂಗಳೂರು ತೊರೆದಿದ್ದಾರೆ. ಮೊಬೈಲ್‌ ಮೂಲಕ ಅವರನ್ನು ಸಂಪರ್ಕಿಸಿ ಆರೋಪಿಗಳ ಬಂಧನದ ವಿಷಯ ತಿಳಿಸಿದ್ದೇವೆ. ಕೆಲವೇ ದಿನಗಳಲ್ಲಿ ನಗರಕ್ಕೆ ವಾಪಸ್‌ ಬರುವುದಾಗಿ ಹೇಳಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು. ‘ಗಿರೀಶ್‌ ಹಾಗೂ ತೌಸಿತ್‌, ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಗಳು ಜೀವ ಬೆದರಿಕೆ ಹಾಕಿದ್ದರಿಂದ ತೌಸಿತ್‌ ದೂರು ನೀಡಿರಲಿಲ್ಲ. ಗಿರೀಶ್‌ ಮಾತ್ರ ದೂರು ನೀಡಿದ್ದರು. ಆ ಸಂಗತಿ ತೌಸಿತ್‌ಗೆ ತಿಳಿದಿರಲಿಲ್ಲ. ನಾವು ಹೇಳಿದ ನಂತರವೇ ಗೊತ್ತಾಗಿದೆ’ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com