ಹುಬ್ಬಳ್ಳಿ: ಹುಬ್ಬಳ್ಳಿಯ ಕಸಬಾಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದ ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರು ವಿರುದ್ಧ ಪೊಲೀಸರು ಶನಿವಾರ ಎಫ್ ಐಆರ್ ದಾಖಲಿಸಿದ್ದಾರೆ.
ಹತ್ಯೆಯಾದ ಹಿಂದೂ ಯುವಕ ಗವಿಸಿದ್ದಪ್ಪ ಅಂಬಿಗೇರ ಮನೆಗೆ ಭೇಟಿ ಸಂದರ್ಭ ಪ್ರಹ್ಲಾದ್ ಜೋಶಿ ಅವರು, ಕಸಬಾಪೇಟೆ ಮಿನಿ ಪಾಕಿಸ್ತಾನದಂತೆ ಕಾಣುತ್ತಿದೆ. ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಈ ಸಂಬಂಧ ಜಮಾತ್ ಮಸೀದಿ ಮುಖ್ಯಸ್ಥರಾದ ಮೊಹಮ್ಮದ್ ಹನೀಫ್ ಜೋಪಡಿ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಇಂದು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 153a, 298ರಡಿ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಗಳ ನಡುವೆ ಶತ್ರತ್ವ ಬೆಳೆಸುವ ಯತ್ನ(153 ಎ) ಮತ್ತು ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಮಾಡಿದ ಆರೋಪ(ಸೆಕ್ಷನ್ 298) ಕೇಸ್ ದಾಖಲಿಸಲಾಗಿದೆ.