
ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆರು ಬೋಗಿ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡುವ ಕಾರ್ಯ ಜೂನ್ ಗೆ ಮುಂದೂಡಲಾಗಿದೆ. ಹೊಸ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಹೊಸ ಸಚಿವರು ಈ ಸೇವೆಗೆ ಚಾಲನೆ ನೀಡಲಿದ್ದಾರೆ.
ಫೆಬ್ರವರಿ 14 ರಂದು ಬಿಇಎಂಎಲ್ ನಿಂದ ಮೂರು ಬೋಗಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್, ಏಪ್ರಿಲ್ ಅಂತ್ಯ ಭಾಗದಲ್ಲಿ ಈ ಸೇವೆಯನ್ನು ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದ್ದರು.
ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಬಿಎಂಆರ್ ಸಿಎಲ್ ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ರೈಲುಗಳ ಸಾಮರ್ಥ್ಯ 975 ಪ್ರಯಾಣಿಕರಿಗೆ ಸಾಕಾಗಲಿದೆ. ಆದರೆ, ಆರು ಬೋಗಿಗಳ ರೈಲು ಕಾರ್ಯಾರಂಭ ಮಾಡಿದ್ದರೆ 1950 ಪ್ರಯಾಣಿಕರು ಸಂಚರಿಸಬಹುದಾಗಿದೆ.
ಆರು ಬೋಗಿಗಳ ರೈಲು ಸಂಚಾರ ಕಾರ್ಯಕ್ರಮ ಮೆಟ್ರೋ ರೈಲಿಗೆ ಪ್ರತಿಷ್ಠೆಯ ಕಾರ್ಯಕ್ರಮವಾಗಿದ್ದು,ಅದ್ದೂರಿಯಾಗಿ ಆಚರಿಸಲು ಬಿಎಂಆರ್ ಸಿಎಲ್ ಹಾಗೂ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೇ ಮಧ್ಯಭಾಗದಲ್ಲಿ ಹೊಸ ಸರ್ಕಾರ ಅಸ್ವಿತ್ವಕ್ಕೆ ಬರಲಿದ್ದು, ನೂತನ ಸಚಿವರ ದಿನಾಂಕ ಅಂತಿಮಗೊಳಿಸಲು ಜೂನ್ ವರೆಗೂ ಬೇಕಾಗುತ್ತದೆ ಎಂದು ಮೆಟ್ರೋ ಮಾಹಿತಿಗಳು ತಿಳಿಸಿವೆ.
ಈ ಮಧ್ಯೆ ಆರು ಬೋಗಿ ಅಳವಡಿಕೆಯ ರೈಲುಗಳ ಪರೀಕ್ಷಾರ್ಥ ಕಾರ್ಯಗಳು ಬೈಯಪ್ಪನಹಳ್ಳಿ ಡಿಪೋದಲ್ಲಿ ನಡೆಯುತ್ತಿವೆ. ರಾತ್ರಿ ವೇಳೆಯಲ್ಲಿ ಹಳ್ಳಿಗಳ ಮೇಲೆ ಪ್ರಾಯೋಗಿಕವಾಗಿ ರೈಲುಗಳನ್ನು ಓಡಿಸಲಾಗುತ್ತಿದೆ.
ಕಾರ್ಯಾಚರಣೆ ಆರಂಭಕ್ಕೂ ಮುನ್ನ ಮೆಟ್ರೋ ರೈಲು ಸುರಕ್ಷತಾ ಕಮಿಷನರ್ ಹಾಗೂ ರೈಲ್ವೆ ಮಂಡಳಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement