ನಾಳೆ ಮತದಾನ; ಬಿಎಂಟಿಸಿ, ಕೆಎಸ್ ಆರ್ ಟಿಸಿ ಪ್ರಯಾಣಿಕರೇ.. ಇನ್ನೆರಡು ದಿನ ಬದಲಿ ವ್ಯವಸ್ಥೆ ಮಾಡಿಕೊಳ್ಳಿ

ರಾಜ್ಯ ವಿಧಾನಸಭೆ ಚುನವಾಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನೆರಡು ದಿನ ರಾಜ್ಯದಲ್ಲಿ ಸರ್ಕಾರಿ ಸಾರಿಗೆ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ರಾಜ್ಯ ವಿಧಾನಸಭೆ ಚುನವಾಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನೆರಡು ದಿನ ರಾಜ್ಯದಲ್ಲಿ ಸರ್ಕಾರಿ ಸಾರಿಗೆ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಹೌದು.. ನಾಳೆ ನಡೆಯಲಿರುವ ಮತದಾನಕ್ಕೆ ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು, ಮತದಾನಕ್ಕಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ರವಾನೆ ಮಾಡಲು ಮತ್ತು ಇತರೆ ಕೆಲಸಗಳಿಗಾಗಿ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಾವಿರಾರು ಬಸ್ ಗಳನ್ನು ಆಯೋಗ ಬಾಡಿಗೆಗೆ ಪಡೆದಿದೆ. ಹೀಗಾಗಿ ರಾಜ್ಯದಲ್ಲಿ ಇನ್ನೆರಡು ದಿನ ಸರ್ಕಾರಿ ಬಸ್ ಸೇವೆಯಲ್ಲಿ ವತ್ಯಯವಾಗಲಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ರಾಜ್ಯ ಚುನಾವಣಾ ಆಯೋಗ ಬಿಎಂಟಿಸಿಯಿಂದ 1493 ಬಸ್ ಗಳು ಮತ್ತು ಕೆಎಸ್ ಆರ್ ಟಿಸಿಯಿಂದ 3800ಕ್ಕೂ ಹೆಚ್ಚು ಬಸ್ ಗಳನ್ನು ಬಾಡಿಗೆಗೆ ಪಡೆದಿದೆ. ಮೇ 11 ಅಂದರೆ ಇಂದಿನಿಂದಲೇ ಈ ಬಸ್ ಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದು, ಸಿಬ್ಬಂದಿಗಳನ್ನು ಆಯಾ ಭಾಗದ ಮತಗಟ್ಟೆಗಳಿಗೆ ರವಾನೆ ಮಾಡುವ ಕೆಲಸ ಮಾಡುತ್ತಿವೆ. 
ಚುನಾವಣೆಗೂ ಧಕ್ಕೆಯಾಗದಂತೆ ಸರ್ಕಾರಿ ಸಾರಿಗೆ ಬಸ್ ಗಳ ಪ್ರಯಾಣಿಕರ ಸೇವೆಗೂ ಧಕ್ಕೆಯಾಗದಂತೆ ಬಸ್ ಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿರುವುದಾಗಿ ಸಾರಿಗೆ ಇಲಾಖೆ ಹೇಳಿದೆ. ಅದರಂತೆ ರಾಜ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುವ ಅಥವಾ ಕಡಿಮೆ ಆದಾಯ ಇರುವ ಮಾರ್ಗಗಳಲ್ಲಿ ಬಸ್ ಗಳ ಸಂಚಾರವನ್ನು ಇನ್ನೆರಡು ದಿನ ಸ್ಥಗಿತಗೊಳಿಸಲು ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಸಂಸ್ಥೆಗಳು ನಿರ್ಧರಿಸಿವೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿರುವ ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಗಳನ್ನು ಆಯಾ ಮತಗಟ್ಟೆಗಳಿಗೆ ಸಾಗಿಸಲು ಆಯೋಗ ಈ ಬಸ್ ಗಳನ್ನು ಬಾಡಿಗೆಗೆ ಪಡೆದಿದೆ.
ಹೀಗಾಗಿ ಇಂದು ಮತ್ತೆ ನಾಳೆ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇನ್ನು ರಾಜ್ಯದ 17 ಜಿಲ್ಲೆಗಳಲ್ಲಿ ಕೆಎಸ್ ಆರ್ ಟಿಸಿ ಒಟ್ಟು 8,796 ಬಸ್ ಗಳನ್ನು ಓಡಿಸುತ್ತಿದೆ. ಇದರಲ್ಲಿ ಅಂತರ್ ರಾಜ್ಯ ಬಸ್ ಸೇವೆ ಕೂಡ ಸೇರಿದೆ. ಆದರೆ ಪ್ರಸ್ತುತ ಚುನಾವಣೆ ಹಿನ್ನಲೆಯಲ್ಲಿ 3800 ಅಧಿಕ ಅಂದರೆ ಶೇ.50ರಷ್ಟು ಬಸ್ ಗಳನ್ನು ಕೆಎಸ್ ಆರ್ ಟಿಸಿ ಚುನಾವಣಾ ಆಯೋಗಕ್ಕೆ ಬಾಡಿಗೆಗೆ ನೀಡಿದೆ. ಇದೇ ಕಾರಣಕ್ಕೆ ಬಸ್ ಸೇವೆಯಲ್ಲಿ ಖಂಡಿತಾ ವ್ಯತ್ಯಯವಾಗಲಿದೆ. 
ಬಿಎಂಟಿಸಿ 1493 ಬಸ್ ಗಳು ಸಾರ್ವಜನಿಕ ಸೇವೆಗೆ ಅಲಭ್ಯ
ಕೆಎಸ್ ಆರ್ ಟಿಸಿಯಂತೆಯೇ ಬಿಎಂಟಿಸಿ 1493 ಬಸ್ ಗಳು ಕೂಡ ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿದೆ. ಹೀಗಾಗಿ ನಗರದಲ್ಲಿ ಇಂದು ಮತ್ತು ನಾಳೆ ಸರ್ಕಾರಿ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ನಾಳೆ ಮತದಾನದ ಹಿನ್ನಲೆಯಲ್ಲಿ ಸಾಕಷ್ಟು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದ್ದರೂ, ಇಂದು ಯಾವುದೇ ರಜೆ ಇಲ್ಲ. ಹೀಗಾಗಿ ಇಂದು ಪ್ರಯಾಣಿಕರು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸಂಚಾರ ದಟ್ಟಣೆ ಕಡಿಮೆ ಇರುವ ಅಥವಾ ಕಡಿಮೆ ಆದಾಯ ಇರುವ ಮಾರ್ಗಗಳಲ್ಲಿ ಬಸ್ ಗಳ ಸಂಚಾರವನ್ನು ಇನ್ನೆರಡು ದಿನ ಸ್ಥಗಿತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ.  ಪೀಣ್ಯ ಕೈಗಾರಿಕಾ ಪ್ರದೇಶದಂತಹ ವಾಣಿಜ್ಯ ಪ್ರದೇಶಗಳಲ್ಲಿನ ಸಂಸ್ಥೆಗಳು ಮತದಾನದ ಹಿನ್ನಲೆಯಲ್ಲಿ ರಜೆ ಘೋಷಣೆ ಮಾಡಿದ್ದು, ಇಂತಹ ಪ್ರದೇಶಗಳಲ್ಲಿ ಪ್ರಯಾಣಿಕರ ಸಂಚಾರ ವಿರಳವಾಗಿರುತ್ತದೆ. ಹೀಗಾಗಿ ಇಂತಹ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಆ ಮಾರ್ಗಗಳ ಬಸ್ ಗಳ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಅಲ್ಲದೆ ನಾಳೆ ಮತದಾನ ಇರುವುದರಿಂದ ಮತದಾನಕ್ಕೆ ದೂರದೂರಿಗೆ ಜನ ತೆರಳುವುದರಿಂದ ಇಂದು ಸಂಜೆಯಿಂದಲೇ ರಾಜ್ಯದ ವಿವಿಧ ಪ್ರದೇಶಗಳಿಗೆ ತೆರಳುವ ಸರ್ಕಾರಿ ಬಸ್ ಗಳು ಖಂಡಿತಾ ಪ್ರಯಾಣಿಕರಿಂದ ತುಂಬಿತುಳುಕಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com