ಬಿಎಸ್‏ವೈ ಸರ್ಕಾರ ಪತನ: ರಾಜ್ಯಪಾಲರ ಆಹ್ವಾನ, ಸುಪ್ರೀಂ ತೀರ್ಪು; ಮುಳುವಾಗಿದ್ದೆಲ್ಲಿ?

ಮೂರು ದಿನಗಳ ಹಿಂದಷ್ಟೇ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪ ಅವರು ಇದೀಗ ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ವಿದಾಯದ ಭಾಷಣ ಮಾಡಿದ ಬಿಎಸ್ ವೈ
ವಿದಾಯದ ಭಾಷಣ ಮಾಡಿದ ಬಿಎಸ್ ವೈ
ಬೆಂಗಳೂರು: ಮೂರು ದಿನಗಳ ಹಿಂದಷ್ಟೇ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪ ಅವರು ಇದೀಗ ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದ ಬಿಜೆಪಿ ಬಹುಮತ ರಹಿತದ ಹೊರತಾಗಿಯೂ ಏಕೈಕ ದೊಡ್ಡ ಪಕ್ಷ ಎಂಬ ಅಂಶದ ಆಧಾರದ ಮೇಲೆ ಸರ್ಕಾರ ರಚನೆಗೆ ಅವಕಾಶ ಪಡೆದಿತ್ತು. ಕರ್ನಾಟಕ ರಾಜ್ಯಪಾಲ ವಜುಬಾಯ್ ವಾಲಾ ಅವರೂ ಕೂಡ ಬಹುಮತ ಸಾಬೀತಿಗೆ ಯಡಿಯೂರಪ್ಪ ಅವರಿಗೆ 15 ದಿನ ಕಾಲಾವಕಾಶ ನೀಡಿದ್ದರು. ಅದರಂತೆ ಕಳೆದ ಗುರುವಾರ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. 
ಆದರೆ ರಾಜ್ಯಪಾಲರ ಈ ನಿರ್ಧಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ವಿಶ್ವಾಸಮತ ಯಾಚನೆಗೆ ಮತ್ತು ಬಹುಮತ ಸಾಬೀತಿಗೆ 15 ದಿನಗಳ ಸುಧೀರ್ಘ ಕಾಲಾವಕಾಶ ನೀಡುವ ಮೂಲಕ ಸ್ವತಃ ರಾಜ್ಯಪಾಲರೇ ಪರೋಕ್ಷವಾಗಿ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅರ್ಜಿಯನ್ನುತುರ್ತು ವಿಚಾರಣೆ ನಡೆಸಿತ್ತು. ಅಂತೆಯೇ ಕುದುರೆ ವ್ಯಾಪಾರದ ವಾಸನೆ ಅರಿತಿದ್ದ ಸುಪ್ರೀಂ ಕೋರ್ಟ್ ತುರ್ತಾಗಿ ವಿಶ್ವಾಸ ಮತ ಯಾಚನೆ ಮಾಡುವಂತೆ ಆದೇಶ ನೀಡಿತ್ತು.
ಅದರಂತೆ ಇಂದು ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚನೆಗೆ ಸಿದ್ಧತೆಯಾಗಿತ್ತಾದರೂ, ಅಂತಿಮ ಹಂತದಲ್ಲಿ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚಿಸದೇ ವಿದಾಯದ ಭಾಷಣ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಬಿಎಸ್ ವೈಗೆ ಮುಳುವಾಯಿತೇ ರಾಜ್ಯಪಾಲರ ನಡೆ?
ಪ್ರಮುಖವಾಗಿ ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲು ಮತ್ತು ಬಿಜೆಪಿ ಸರ್ಕಾರ ಪತನವಾಗಲು ಪರೋಕ್ಷವಾಗಿ ರಾಜ್ಯಪಾಲರ ನಡೆ ಕಾರಣವಾಯಿತೇ ಎಂಬ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ಬಹುಮತ ಸಾಬೀತು ಪಡಿಸಲು ಮತ್ತು ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ವಿಪಕ್ಷಗಳು ಆರೋಪಿಸಿರುವಂತೆ ಬಿಎಸ್ ವೈ ವಿಶ್ವಾಸ ಮತ ಯಾಚನೆಗೆ 6 ದಿನಗಳ ಕಾಲಾವಕಾಶ ಕೇಳಿದ್ದರಂತೆ. ಆದರೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದೇಕೆ? ರಾಜ್ಯಪಾಲರೇ ಪರೋಕ್ಷವಾಗಿ ಶಾಸಕರ ಖರೀದಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಬೇರಾವುದೇ ರಾಜ್ಯದಲ್ಲೂ ಕೈಗೊಳ್ಳದ ತೀರ್ಮಾನ ಕರ್ನಾಟಕದಲ್ಲಿ ಏಕೆ?
ಇನ್ನು ಈ ಹಿಂದೆ ಗೋವಾ, ಬಿಹಾರ ರಾಜ್ಯಗಳಲ್ಲಿ ರಾಜ್ಯಪಾಲರು ಅತಿ ದೊಡ್ಡ ಪಕ್ಷಗಳನ್ನು ಹೊರತು ಪಡಿಸಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮನ್ನಣೆ ನೀಡಿ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಆದರೆ ಕರ್ನಾಟಕ ರಾಜ್ಯಪಾಲರಾದ ವಜುಬಾಯ್ ವಾಲಾ ಅವರು ಬಿಜೆಪಿ ಏಕೈಕ ದೊಡ್ಡ ಪಕ್ಷ ಎಂಬ ಒಂದೇ ಕಾರಣಕ್ಕೆ ಮನ್ನಣೆ ನೀಡಿ, ಬಿಎಸ್ ವೈ ಅವರನ್ನು ಸರ್ಕಾರ ರಚನೆಗೆ ಆಹ್ವಾನ ಮಾಡಿದ್ದರು. ಇದು ಆ ರಾಜ್ಯಗಳ ಏಕೈಕ ದೊಡ್ಡ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ಇದೀಗ ಆ ಪಕ್ಷಗಳೂ ಕೂಡ ಏಕೈಕ ದೊಡ್ಡ ಪಕ್ಷದ ಆಧಾರದ ಮೇಲೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಿವೆ.
'ಕೈ' ಕೊಟ್ಟ ಶಾಸಕರು, ಫಲಿಸದ ರೆಡ್ಡಿಗಳ ತಂತ್ರಗಾರಿಕೆ
ಇನ್ನು ಚುನಾವಣಾ ಫಲಿತಾಂಶ ಅತಂತ್ರವಾಗುತ್ತಿದ್ದಂತೆಯೇ ಎಚ್ಚೆತ್ತಿದ್ದ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಮುಂದಾದವು. ಫಲಿತಾಂಶ ಅತಂತ್ರವಾಗುತ್ತಿದ್ದಂತೆಯೇ ಜೆಡಿಎಸ್ ಬೇಷರತ್ ಬೆಂಬಲ ಘೋಷಿಸಿದ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಮುಂದಾಯಿತು. ಆದರೆ ಆಪರೇಷನ್ ಕಮಲ ಭೀತಿಯಿಂದ ತಮ್ಮ ಶಾಸಕರನ್ನು ರೆಸಾರ್ಟ್ ಗಳಲ್ಲಿ ಕೂಡಿ ಹಾಕಿದವು. ಕೊನೆಯ ಕ್ಷಣದವರೆಗೂ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಸೆಳೆಯಲು ಅಂತಿಮ ಕ್ಷಣದವರೆಗೂ ಪ್ರಯತ್ನಿಸಿತ್ತು. ಸ್ವತಃ ಗಣಿ ಧಣಿ ಜನಾರ್ಧನ ರೆಡ್ಡಿ, ಬಿಎಸ್ ವೈ ಪುತ್ರ ವಿಜಯೇಂದ್ರ, ಬಿಎಸ್ ವೈ ಆಪ್ತ ಬಿಜೆ ಪುಟ್ಟಸ್ವಾಮಿ ಸೇರಿದಂತೆ ಹಲವು ನಾಯಕರು ಶಾಸಕರ ಸೆಳೆಯುವ ಪ್ರಯತ್ನ ಮಾಡಿದರು. ಅಷ್ಟೇ ಏಕೆ ಖುದ್ಧು ಬಿಎಸ್ ವೈ ಕೂಡ ಕಾಂಗ್ರೆಸ್ ಪಕ್ಷ ಹಿರೇಕರೂರು ಶಾಸಕ ಬಿಸಿ ಪಾಟೀಲ್ ಅವರಿಗೆ ಕರೆ ಮಾಡಿದ್ದ ಕುರಿತೂ ವರದಿಯಾಗಿವೆ. ಆದರೆ ಈ ಯಾವುದೇ ತಂತ್ರಗಾರಿಕೆಗಳು ಬಿಜೆಪಿಗೆ ಅಗತ್ಯ ಬಹುಮತ ತಂದುಕೊಡುವಲ್ಲಿ ವಿಫಲವಾದವು. 
ಅಂತಿಮ ಕ್ಷಣದಲ್ಲಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಅವರ ಬಳಿ ಇದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ನಾಪತ್ತೆಯಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ವಿಧಾನಸೌಧಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ಬಿಎಸ್ ವೈ ಅವರ ಅಂತಿಮ ಕ್ಷಣದ ಕಸರತ್ತೂ ಕೂಡ ಕೈಕೊಟ್ಟಿತ್ತು. ಬಿಜೆಪಿ ಶಾಸಕರ ಸೆಳೆಯಲಾಗದಿದ್ದರೂ, ಕನಿಷ್ಟ ಪಕ್ಷ ವಿಧಾನಸಭೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಗೈರು ಹಾಜರಿ ಮಾಡಿಸುವ ಮೂಲಕವಾದರೂ ಮ್ಯಾಜಿಕ್ ನಂಬರ್ ಅನ್ನು 104ಕ್ಕೆ ಇಳಿಸುವ ಕಸರತ್ತು ಕೂಡ ಕೈಕೊಟ್ಟಿತ್ತು. 
ಒಂದು ವೇಳೆ ಬಿಎಸ್ ವೈ ವಿಶ್ವಾಸ ಮತಯಾಚಿಸಿದ್ದರೂ, ಶಾಸಕರಿಗೆ ಆಯಾ ಪಕ್ಷ ವಿಪ್ ಜಾರಿ ಮಾಡಿದ್ದರಿಂದ ಶಾಸಕರು ಬಿಜೆಪಿ ಸರ್ಕಾರದ ಮತ ಹಾಕುತ್ತಿರಲಿಲ್ಲ. ಹೀಗಾಗಿ ಮುಜುಗರಕ್ಕೆ ಬದಲಾಗಿ ರಾಜಿನಾಮೆ ಸೂಕ್ತ ಎಂದು ಬಿಎಸ್ ವೈ ರಾಜಿನಾಮೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com