ಬೆಂಗಳೂರು: ಕೆಎಸ್ಆರ್'ಪಿ ಬಸ್ ಡಿಕ್ಕಿ; 2 ವರ್ಷದ ಮಗು ಸಾವು

ರಾಜ್ಯ ಮೀಸಲು ಪಡೆ (ಕೆಎಸ್'ಆರ್'ಪಿ) ಬಸ್ ಡಿಕ್ಕಿ ಹೊಡೆದು ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಆರ್'ಎಂಸಿ ಯಾರ್ಡ್'ನ ಆಶ್ರಯನಗರದಲ್ಲಿ ಬುಧವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಮೀಸಲು ಪಡೆ (ಕೆಎಸ್'ಆರ್'ಪಿ) ಬಸ್ ಡಿಕ್ಕಿ ಹೊಡೆದು ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಆರ್'ಎಂಸಿ ಯಾರ್ಡ್'ನ ಆಶ್ರಯನಗರದಲ್ಲಿ ಬುಧವಾರ ನಡೆದಿದೆ. 
ಆಶ್ರಯನಗರದಲ್ಲಿ ನಿವಾಸಿಗಳಾದ ವಿಕ್ಟರಿ ವೇಲು ಮತ್ತು ಲತಾ ದಂಪತಿ ಪುತ್ರ ಗಿರಿ ಪ್ರಕಾಶ್ ಮೃತ ಬಾಲಕನಾಗಿದ್ದಾನೆ. ಘಟನೆ ಸಂಬಂಧ ಕೆಎಸ್ಆರ್'ಪಿ ಬಸ್ ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದೆ. 
ವಿಕ್ಟರಿ ವೇಲು ಅವರು ಕೂಲಿ ಕಾರ್ಮಿಕರಾಗಿದ್ದು, ಕುಟುಂಬ ಸಮೇತ ಆಶ್ರಯನಗರದಲ್ಲಿ ನೆಲೆಸಿದ್ದಾರೆ. ಬಾಲಕ ಗಿರಿಪ್ರಕಾಶ್ ಬೆಳ್ಳಂಬೆಳಗ್ಗೆ ತಿಂಡಿ ಬೇಕು ಎಂದು ಅಳತೊಡಗಿದ್ದ. ಹೀಗಾಗಿ, ತಂದೆ ವಿಕ್ಟರಿ ವೇಲು ಅವರು ಪುತ್ರನನ್ನು ಎಥ್ತಿಕೊಂಡು ಮನೆ ಸಮೀಪದ ಅಂಗಡಿಗೆ ಹೋಗಿದ್ದರು. 
ತಿಂಡಿ ತೆಗೆದುಕೊಂಡು ಅಂಗಡಿಯವರಿಗೆ ಹಣ ನೀಡುವಷ್ಟರಲ್ಲಿ ಬಾಲಕ ಗಿರಿಪ್ರಕಾಶ್ ಒಬ್ಬನೇ ಮನೆ ಕಡೆಗೆ ಓಡಿ ಹೋಗಿದ್ದಾನೆ. ಈ ವೇಳೆ ರಸ್ತೆ ದಾಟುವಾಗ ಅಲ್ಲಿಯೇ ನಿಂತಿದ್ದ ಕೆಎಸ್ಆರ್'ಪಿ ಚಾಲಕ ಸಹ ವಾಹನ ಚಲಾಯಿಸಿದ್ದಾರೆ. ಇದರಿಂದ ಬಾಲಕನಿಗೆ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಕೆಎಸ್ಆರ್'ಪಿ ತುಕಟಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಬೆಳಿಗ್ಗೆ 5.30ರ ಸುಮಾರಿಗೆ ಸೋಲದೇನಹಳ್ಳಿ ಕಡೆ ತೆರಳಲು ಬಸ್ ಚಾಲಕ ಮುಂದಾಗಿದ್ದ. ಈ ವೇಳೆ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com