ಬೆಂಗಳೂರು: ಮಕ್ಕಳ ಕಳ್ಳತನ ವದಂತಿಗಳ ಬಗೆಗೆ ಜನರ ಆತಂಕ ದೂರ ಮಾಡಲು ಪೋಲೀಸರು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
"ಸಾಮಾಜಿಕ ತಾಣದಲ್ಲಿ ಮಕ್ಕಳ ಕಳ್ಳತನ ವದಂತಿಗಳು ದಟ್ಟವಾಗಿ ಹಬ್ಬುತ್ತಿದ್ದು ಇದರಿಂದ ಜನ ಭೀತಿಗೆ ಒಳಗಾಗಿದ್ದಾರೆ. ಈ ಕುರಿತಂತೆ ಪೋಲೀಸ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ " ರಾಜ್ಯ ಮಾಹಿತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರದ ಅನೇಕ ಭಾಗಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನು ಮಕ್ಕಳ ಅಪಹರಣಕಾರರೆಂದು ಭಾವಿಸಿ ಥಳಿಸಲಾಗುತ್ತಿದೆ. ಇಂತಹಾ ಘಟನೆಗಳ ಕುರಿತಂತೆ ಪೊಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು. ಮುಂದೆ ಇಂತಹಾ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶಿಸಿದ್ದಾರೆ.
ರಾಜ್ಯದ ಅನೇಕ ಕಡೆ ಕೆಲ ದಿನಗಳಿಂದ ಮಕ್ಕಳ ಅಪಹರಣ ವದಂತಿಗಳು ದಟ್ಟವಾಗಿದ್ದು ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಲಾದ ವ್ಯಕ್ತಿಯನ್ನು ಜನರ ಗುಂಪು ಥಳಿಸಿ ಸಾಯುವಂತೆ ಮಾಡಿತ್ತು..