

ಮಂಗಳೂರು: ದಿನವಿಡೀ ಅವ್ಯಾಹತ ಮಳೆ ಕಂಡಿದ್ದ ಮಂಗಳೂರು ನಗರ ಬುಧವಾರ ಸಹಜ ಸ್ಥಿತಿಗೆ ಮರಳುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರಗೊಂಡಿದ್ದ ಕಡೆಗಳಲ್ಲೆಲ್ಲಾ ಇಂದು ನೀರು ಇಂಗಿ ಹೋಗುತ್ತಿದೆ. ಜೆಪ್ಪಿನಮೊಗರಿನಂತಹ ಕೆಲವು ತಗ್ಗು ಪ್ರದೇಶಗಳಲ್ಲಿ ಮಾತ್ರ ಇನ್ನೂ ನೀರಿನಿಂದ ಮುಳುಗಡೆಯಾಗಿವೆ.
ಇಂದು ರಾತ್ರಿ ಮಂಗಳೂರು ಸುತ್ತಮುತ್ತ ತೀವ್ರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಮಳೆಯಿಂದ ಸಾವಿಗೀಡಾದ ಮೋಹಿನಿ ಮತ್ತು ಮುಕ್ತಾ ಬಾಯಿಯವರ ಕುಟುಂಬ ವರ್ಗದವರಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ 5 ಲಕ್ಷ ರೂಪಾಯಿ ಚೆಕ್ ನ್ನು ಹಸ್ತಾಂತರಿಸಿದರು. ಮಂಗಳೂರು ಸಮೀಪ ಉದಯನಗರದಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಮೋಹಿನಿ ಮೃತಪಟ್ಟರೆ ಕೊಡಿಯಾಲ್ ಬೈಲ್ ನಲ್ಲಿ ಮಳೆಗೆ ಮನೆ ಮುಳುಗಿ ಮುಕ್ತಾ ಬಾಯಿ ಮೃತಪಟ್ಟಿದ್ದಾರೆ. ಮೂಡಬಿದ್ರೆಯಲ್ಲಿ ಗುಡುಗು ಮಿಂಚಿಗೆ ಮೃತಪಟ್ಟ ಮಹಿಳೆಯ ಶವಪರೀಕ್ಷೆ ವರದಿ ಬರಬೇಕಾಗಿದ್ದು ಪರಿಹಾರದ ಚೆಕ್ ಇನ್ನೂ ಕೈಗೆ ಸೇರಿಲ್ಲ.
ನಿನ್ನೆಯ ಮಳೆಗೆ ಮಂಗಳೂರು ನಗರದಲ್ಲಿ 52 ಮನೆಗಳು ಮತ್ತು ಬಂಟ್ವಾಳದಲ್ಲಿ 16 ಮನೆಗಳು ಹಾನಿಗೀಡಾಗಿವೆ. ಸಂತ್ರಸ್ತ ಜನರಿಗೆ ಪರಿಹಾರ ಒದಗಿಸಲು ಕಂದಾಯ ಇಲಾಖೆ ಹಾನಿಗೀಡಾದ ಮನೆಗಳ ಪರಿಸ್ಥಿತಿ ಅವಲೋಕಿಸುತ್ತಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು 38 ಸದಸ್ಯರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸನ್ನದ್ಧವಾಗಿದೆ.
ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ ಮತ್ತು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ನಿನ್ನೆ ಹಲವು ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದರು. ಮನೆಗಳನ್ನು ಮತ್ತು ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ತುರ್ತು ಪರಿಹಾರ ಧನ ನೀಡಬೇಕೆಂದು ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಕೋರಿದ್ದಾರೆ.
ರಾಜಕಾಲುವೆ ಒತ್ತುವರಿ ಮತ್ತು ಒಳಚರಂಡಿಗಳ ಅತಿಕ್ರಮಣದಿಂದ ಮಳೆ ಬಂದಾಗ ರಸ್ತೆಯ ಮೇಲೆ ನೀರು ಹರಿದು ನೀರು ನುಗ್ಗಿ ಅನೇಕ ಮನೆಗಳು ಮುಳುಗಡೆಯಾಗಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೆಂಥಿಲ್ ಸಮಿತಿಯೊಂದನ್ನು ರಚಿಸಿದ್ದು ನಗರದ ಒತ್ತುವರಿ ಸ್ಥಳಗಳನ್ನು ಗುರುತಿಸಿ ಇನ್ನು ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಹೇಳಿದೆ. ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವಲ್ಲಿ ಮಂಗಳೂರು ನಗರ ಪಾಲಿಕೆ ಅಸಮರ್ಥವಾಗಿದೆ, ಇದರಿಂದಾಗಿ ನಿನ್ನೆಯ ಮಳೆಗೆ ಮಂಗಳೂರಿನಲ್ಲಿ ಪ್ರವಾಹ ಉಂಟಾಗಿದೆ ಎಂದು ಅನೇಕ ನಾಗರಿಕರು ಆರೋಪಿಸುತ್ತಿದ್ದಾರೆ.
ಈ ಮಧ್ಯೆ ಇಂದು ಮಂಗಳೂರು ಜಿಲ್ಲಾಡಳಿತ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿತ್ತು.