ಕಾವೇರಿ ನೀರು ಪಡೆಯುವ ತಮಿಳುನಾಡು ಕೊಡವರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಹೇಗೆ: ಸಿಎಂ ಗೆ ಎಸ್.ಎಲ್ ಭೈರಪ್ಪ ಪ್ರಶ್ನೆ

ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ...
ಕುಮಾರಸ್ವಾಮಿ ಮತ್ತು ಎಸ್ ,ಎಲ್ ಭೈರಪ್ಪ
ಕುಮಾರಸ್ವಾಮಿ ಮತ್ತು ಎಸ್ ,ಎಲ್ ಭೈರಪ್ಪ
ಮೈಸೂರು: ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು ಕಾವೇರಿ ನೀರಿಗಾಗಿ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ತಮಿಳುನಾಡು ತಗಾದೆ ತೆಗೆಯುತ್ತಲೇ ಇರುತ್ತದೆ. ಆದರೆ ಈಗ ಕೊಡಗಿನಲ್ಲಿ ಆಗಿರುವ ನಷ್ಟಕ್ಕೆ ಮಾತ್ರ ಪ್ರತಿಕ್ರಿಯೇ ನೀಡದೇ ಮೌನವಾಗಿ ಕುಳಿತಿದೆ. ನಮಗೆ ನಷ್ಟವಾದರೂ, ಲಾಭವಾದರೂ ಅವರಿಗೆ ನೀರು ಬೇಕು. ಇದು ಎಂತಹ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಇದೊಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ ಎಂದು ತಮ್ಮ ಸಲಹೆ ಮತ್ತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ತಂತ್ರ ಬಳಸಿ ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆಗೆ ಹೇಗೆ ಪ್ರತಿತಂತ್ರ ರೂಪಿಸಬಹುದು ಎಂದು ಎಸ್.ಎಲ್.ಭೈರಪ್ಪ ಅವರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿ ಹೇಳಿದ್ದಾರೆ.
ಹೆಚ್ಚು ಮಳೆ ಮತ್ತು ಬಿರುಗಾಳಿಯಿಂದಾಗಿ ಕೊಡಗಿನಲ್ಲಿ ಭಾರೀ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಸಾವಿರಾರು ಕೋಟಿ ರೂ. ಖರ್ಚು ಹಾಗೂ ಸಾರ್ವಜನಿಕರು ಕೊಡುತ್ತಿರುವ ದೇಣಿಗೆಗಳು ಸರ್ವವಿಧಿತ. ಹೆಚ್ಚು ಮಳೆಯಾಗಲಿ, ಸಾಧಾರಣ ಮಳೆಯಾದರೂ ತಮಿನಾಡು ಸರ್ಕಾರ ಕಾದು ಕುಳಿತು, ತಗಾದೆ ತೆಗೆಯುವ ಮೂಲಕ ನೀರನ್ನು ಕಬಳಿಸುತ್ತದೆ. 
ಆಗದೇ ಇದ್ದಾಗ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವನ್ನು ಒತ್ತಾಯಿಸುತ್ತದೆ. ಮೇಲಿನವರು ಈ ಹಕ್ಕೋತ್ತಾಯವನ್ನು ಈಗ ಮನ್ನಿಸದಿದ್ದರೂ ಪರವಾಗಿಲ್ಲ.
ತಮಿಳುನಾಡು ಖ್ಯಾತೆ ತೆಗೆದಾಗ ಈ ಅಂಶವನ್ನು ರಾಜ್ಯ ಸೇರಿಸಿ ವಾದ ಮಾಡಬಹುದು.ಕೊಡಗಿನ ನೀರು ಬೇಕು, ಆದರೆ ಅದರ ಹಾನಿಯನ್ನು ತುಂಬಲು ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com