ಕಳಪೆ ಆಹಾರ ಪೂರೈಕೆ: ಇಂದಿರಾ ಕ್ಯಾಂಟೀನ್ ಎಂದರೆ ಮೂಗು ಮುರಿಯುತ್ತಿದ್ದಾರೆ ಹಲವು ಗ್ರಾಹಕರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಇದು ಹಲವು ಗ್ರಾಹಕರಲ್ಲಿ ಬೇಸರವನ್ನುಂಟು ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಇದು ಹಲವು ಗ್ರಾಹಕರಲ್ಲಿ ಬೇಸರವನ್ನುಂಟು ಮಾಡಿದೆ. 
ಆರಂಭದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಇಂದಿರಾ ಕ್ಯಾಂಟೀನ್ ಇದೀಗ ಕಳಪೆ ಆಹಾರ ಪೂರೈಕೆ ಮಾಡುವ ಮೂಲಕ ತನ್ನ ಖ್ಯಾತಿಯನ್ನು ನಾಶಪಡಿಸಿಕೊಳ್ಳುತ್ತಿದೆ. 
ಇಂದಿರಾ ಕ್ಯಾಂಟೀನ್ ಗೆ ಬರುವ ಹಲವು ಗ್ರಾಹಕರು ಆಹಾರದ ಗುಣಮಟ್ಟತೆಯ ಬಗ್ಗೆ ದೂರುಗಳನ್ನು ನೀಡುತ್ತಲೇ ಇದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಕಿವಿಗೊಡುತ್ತಿಲ್ಲ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಎರಡು ದಿನಗಳ ಹಿಂದಷ್ಟೇ ಪರಿಸ್ಥಿತಿಯನ್ನು ಅವಲೋಕಿಸಿಸಲಾಗಿದೆ. ಶೀಘ್ರದಲ್ಲಿಯೇ ಆಹಾರ ಗುಣಮಟ್ಟತೆಯ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಇಂದಿರಾ ಕ್ಯಾಂಟೀನ್ ನಲ್ಲಿ ನೀಡಲಾಗುವ ಇಡ್ಲಿ, ಅವಲಕ್ಕಿ ಬಾತ್, ಅನ್ನ, ಸಾಂಬಾರ್ ಕಳಪೆ ಗುಣಮಟ್ಟದ್ದಾಗಿರುತ್ತದೆ ಎಂದು ಹಲವು ಗ್ರಾಹಕರು ಹೇಳಿಕೊಂಡಿದ್ದಾರೆ. 
ನಗರ 198 ವಾರ್ಡ್ ಗಳಲ್ಲಿ ಒಟ್ಟು 199 ಕ್ಯಾಂಟೀನ್ ಗಳಿದ್ದು, 22 ಕಿಚನ್ ಗಳಿಂದ ಬಿಬಿಎಂಪಿ ಕ್ಯಾಂಟೀನ್ ಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತಿದೆ. 
ಬೊಮ್ಮನಹಳ್ಳಿ ನಿವಾಸಿ ಹಾಗೂ ಕ್ಯಾಬ್ ಚಾಲಕ ಪ್ರಕಾಶ್ ಎಂಬುವವರು ಮಾತನಾಡಿ, ಕ್ಯಾಂಟೀನ್ ನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟತೆ ಅತ್ಯಂತ ಕಳಪೆಯದ್ದಾಗಿದೆ. ನಗರದಲ್ಲಿರುವ ಹಲವು ಕ್ಯಾಂಟೀನ್ ಗಳಲ್ಲಿ ಆಹಾರವನ್ನು ಸೇವನೆ ಮಾಡಿದ್ದೇವೆ. ಇಡ್ಲಿ ಗುಣಮಟ್ಟತೆ ಕಳಪೆಯಾಗಿರುತ್ತದೆ. ಸರ್ಕಾರ ಯೋಜನೆಯನ್ನು ಜಾರಿಗೆ ತಂದಾಗ ಮಾತ್ರ ಆಹಾರದ ಗುಣಮಟ್ಟತೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ. 
ಇದರಂತೆ ಹಲವು ಕ್ಯಾಂಟೀನ್ ಗಳಲ್ಲೂ ಈ ಕುರಿತು ಪರಿಶೀಲನೆ ನಡೆಸಲಾಗಿದ್ದು, ಹಲವು ಕ್ಯಾಂಟೀನ್ ಗಳಲ್ಲಿ ಗುಣಮಟ್ಟತೆ ಕಳಪೆಯಾಗಿರುವುದು ತಿಳಿದುಬಂದಿದೆ. ರಾಮಮೂರ್ತಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್'ಗೆ ಬೆಳಿಗ್ಗೆ 7.30ರ ಸುಮಾರಿಗೆ ಭೇಟಿ ನೀಡಿದಾಗ ಅವಲಕ್ಕಿ ಬಾತ್ ನೀಡಲಾಗಿತ್ತು. ಈ ವೇಳೆ ಗ್ರಾಹಕರ ಪ್ರತಿಕ್ರಿಯೆ ಕೇಳಿದಾಗ ಅವಲಕ್ಕಿ ಬಾತ್ ಹಳಸಿರುವುದಾಗಿ, ತಣ್ಣಗಿದೆ ಎಂದು ಹೇಳಿದರು. 
ಇದರಂತೆ ಬಸವನಗುಡಿಯಲ್ಲಿರುವ ಕ್ಯಾಂಟೀನ್ ನಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ಮಧ್ಯಾಹ್ನ ಅನ್ನ, ಸಾಂಬಾರ್ ನೀಡಲಾಗಿತ್ತು. ಈ ವೇಳೆ ಮಾತನಾಡಿದ ಗ್ರಾಹಕರು ಅಕ್ಕಿಯ ಗುಣಮಟ್ಟತೆ ಅತ್ಯಂತ ಕಳಪೆಯೆಂದು ಹೇಳಿದರು. ಇನ್ನು ಇಡ್ಲಿ ಗುಣಮಟ್ಟತೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದವರಂತೂ ಬೆರಳೆಣಿಕೆಯಷ್ಟು ಮಂದಿ.
ಕ್ಯಾಂಟೀನ್ ನಲ್ಲಿ ವಿತರಿಸಲಾಗುವ ಆಹಾರಗಳು ಶೇ.90 ರಷ್ಟು ತಣ್ಣಗಾಗಿರುತ್ತವೆ. ಇಡ್ಲಿಯ ಗುಣಮಟ್ಟತೆಯನ್ನು ಸುಧಾರಿಸುವಂತೆ ಸುಮತಿ ಎಂಬುವವರು ಹೇಳಿದ್ದಾರೆ. 
ಇಡ್ಲಿ ಗಟ್ಟಿಯಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಆಹಾರ ತಣ್ಣಗಾಗುವ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 
ಆಹಾರ ಗುಣಮಟ್ಟತೆ ಬಗ್ಗೆ ದೂರುಗಳು ಹೆಚ್ಚಾಗಿ ಬಂದ ಹಿನ್ನಲೆಯಲ್ಲಿ ಹಲವು ಕ್ಯಾಂಟೀನ್ ಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಹಲವು ಸಮಸ್ಯೆಗಳು ಗಮನಕ್ಕೆ ಬಂದವು. ಒಂದು ಪ್ರದೇಶದಲ್ಲಿ ಸಮಸ್ಯೆಗಳನ್ನು ಬಗೆಹರಿಸಿದರೆ ಮತ್ತೊಂದೆಡೆ ಸಮಸ್ಯೆಗಳು ಉದ್ಭವಿಸುತ್ತಿವೆ. ಯೋಜನೆ ಜಾರಿಯಾಗಿ ವರ್ಷಕ್ಕಿಂತಲೂ ಹೆಚ್ಚು ದಿನಗಳಾಗಿವೆ. ಆಹಾರ ಗುಣಮಟ್ಟತೆ ಹೆಚ್ಚು ಮಾಡುವ ಕುರಿತು ನಮ್ಮಿಂದ ಸಾಧ್ಯವಾದಷ್ಟು ಹೆಚ್ಚಿನ ಪರಿಶ್ರಮಗಳನ್ನು ಪಡುತ್ತಿದ್ದೇವೆ. ಕೆಟ್ಟ ಗುಣಮಟ್ಟದ ಆಹಾರಗಳನ್ನು ರವಾನಿಸದಂತೆ ಕಠಿಣವಾಗಿ ಸೂಚಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ವೆಂಕಟೇಶ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com