ಮಹಿಳಾ ಪೊಲೀಸರಿಗೆ ಸೀರೆ ಬದಲು ಪ್ಯಾಂಟ್, ಶರ್ಟ್ ಸಮವಸ್ತ್ರ: ಬದಲಾದ ನಿಯಮ ವ್ಯಕ್ತವಾಗುತ್ತಿದೆ ಪರ-ವಿರೋಧದ ಅಭಿಪ್ರಾಯ

ಮಹಿಳಾ ಪೊಲೀಸರಿಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಿರುವ ರಾಜ್ಯ ಪೊಲೀಸ್ ಇಲಾಖೆಯ ಹೊಸ ನಿಯಮದ ಪರ ಹಾಗೂ ವಿರೋಧದ ಅಭಿಪ್ರಾಯಗಳು ಇದೀಗ ವ್ಯಕ್ತವಾಗತೊಡಗಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಹಿಳಾ ಪೊಲೀಸರಿಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಿರುವ ರಾಜ್ಯ ಪೊಲೀಸ್ ಇಲಾಖೆಯ ಹೊಸ ನಿಯಮದ ಪರ ಹಾಗೂ ವಿರೋಧದ ಅಭಿಪ್ರಾಯಗಳು ಇದೀಗ ವ್ಯಕ್ತವಾಗತೊಡಗಿವೆ. 
ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮವಸ್ತ್ರ ಹಾಗೂ ಕೇಶವಿನ್ಯಾಸ, ಬಳೆ ಇನ್ನಿತರೆ ಆಭರಣ ಧರಿಸುವ ಸಂಬಂಧ ಏಕರೂಪ ನಿಯಮಗಳನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆಗೆ ಕೆಲ ಮಹಿಳಾ ಪೊಲೀಸರು ಪರವಾಗಿ ಮಾತನಾಡುತ್ತಿದ್ದರೆ, ಇನ್ನೂ ಕೆಲವರು ವಿರುದ್ಧವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 
40 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿರುವ ಮಹಿಳಾ ಪೊಲೀಸರು ನಿಯಮದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರ, ಯುವ ಮಹಿಳಾ ಪೊಲೀಸರು ಆದೇಶವನ್ನು ಸ್ವಾಗತಿಸಿದ್ದಾರೆ. 
ಇದು ನನ್ನ 24 ವರ್ಷದ ಸೇವೆ. ನಾನು ಎಂದಿಗೂ ಶರ್ಟ್ ಹಾಗೂ ಪ್ಯಾಂಟ್ ಧರಿಸಿಲ್ಲ. ಸೀರೆಯಲ್ಲಿಯೇ ನಾನು ಹೆಚ್ಚು ಆರಾಮವಾಗಿರುತ್ತೇನೆ. ಅಲ್ಲದೆ, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆಂದು 46 ವರ್ಷದ ಮಹಿಳಾ ಪೊಲೀಸ್ ಒಬ್ಬರು ಹೇಳಿದ್ದಾರೆ. 
ಪರೇಡ್ ಗಳಲ್ಲಿ ನಾವು ಭಾಗವಹಿಸಿದ್ದೆವು. ಸೀರೆಯಲ್ಲಿಯೇ ಪ್ರತಿಭಟನೆ ವೇಳೆ ಭದ್ರತೆಯನ್ನು ನೀಡಿದ್ದೆವು. ಆದರೆ, ಈ ವೇಳೆ ಎಂದಿಗೂ ಸಮಸ್ಯೆಗಳನ್ನು ಎದುರಿಸಿಲ್ಲ ಎಂದು ಮತ್ತೊಬ್ಬ ಮಹಿಳಾ ಪೊಲೀಸ್ ತಿಳಿಸಿದ್ದಾರೆ. 
ಬೆಂಗಳೂರು ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮೇರಿ ಶೈಲಜಾ ಅವರು ಮಾತನಾಡಿ, ಶರ್ಟ್ ಹಾಗೂ ಪ್ಯಾಂಟ್ ಹೆಚ್ಚು ಆರಾಮದಾಯಕವಾಗಿರುತ್ತವೆ. ಪ್ರತಿಭಟನಾ ರ್ಯಾಲಿಗಳು ನಡೆಯುವಾಗ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ. ಈ ವೇಳೆ ಪ್ರತಿಭಟನಾಕಾರರ ನಡುವೆ ಅವರೂ ಕೂಡ ನಡೆಯಬೇಕಾಗಿರುತ್ತದೆ. ಸೀರೆ ಉಟ್ಟು ನಡೆಯುವುದು ಅತ್ಯಂತ ತ್ರಾಸದಾಯಕವಾಗಿರುತ್ತದೆ. ಪ್ಯಾಂಟ್ ಹಾಗೂ ಶರ್ಟ್ ಗಳನ್ನು ಧರಿಸಿ ಜನರನ್ನು ವಶಕ್ಕೆ ವ್ಯಾನ್ ಗೆ ಹತ್ತಿಸುವುದು ಸುಲಭವಾಗಿರುತ್ತದೆ ಎಂದು ತಿಳಿಸಿದ್ದಾರೆ. 
ಸೀರೆ ಉಡುವುದರಲ್ಲಿ ನಮಗೇನೂ ಸಮಸ್ಯೆಗಳಿಲ್ಲ. ಆದರೆ, ಹೊಸ ಸಮವಸ್ತ್ರ ಮಹಿಳಾ ಪೊಲೀಸರಿಗೆ ಸಮಸ್ಯೆಯನ್ನು ತಂದೊಡ್ಡಲಿದೆ. ಶರ್ಟ್ ಹಾಗೂ ಪ್ಯಾಂಟ್ ಧರಿಸುವುದು ಕಷ್ಟವಾಗಿರುತ್ತದೆ ಎಂದು ಮತ್ತೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com