ಪೊಲೀಸರಿಂದ ದೌರ್ಜನ್ಯ ಆರೋಪ: ಪ್ರತಿಭಟನೆಗಿಳಿದ ಶಿವಾಜಿನಗರ ಬೀದಿ ವ್ಯಾಪಾರಿಗಳು

ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದ ಪೊಲೀಸರ ವಿರುದ್ಧ ಬೀದಿ ವ್ಯಾಪಾರಿಗಳು ತಿರುಗಿ ಬಿದ್ದು, ಪೊಲೀಸರು ದೌರ್ಜನ್ಯವೆಸಗುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ ಶಿವಾಜಿನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು...
ಪೊಲೀಸರಿಂದ ದೌರ್ಜನ್ಯ ಆರೋಪ: ಪ್ರತಿಭಟನೆಗಿಳಿದ ಶಿವಾಜಿನಗರ ಬೀದಿ ವ್ಯಾಪಾರಿಗಳು
ಪೊಲೀಸರಿಂದ ದೌರ್ಜನ್ಯ ಆರೋಪ: ಪ್ರತಿಭಟನೆಗಿಳಿದ ಶಿವಾಜಿನಗರ ಬೀದಿ ವ್ಯಾಪಾರಿಗಳು
ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದ ಪೊಲೀಸರ ವಿರುದ್ಧ ಬೀದಿ ವ್ಯಾಪಾರಿಗಳು ತಿರುಗಿ ಬಿದ್ದು, ಪೊಲೀಸರು ದೌರ್ಜನ್ಯವೆಸಗುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ ಶಿವಾಜಿನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 
ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದರು. ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಪಾದಚಾರಿ ಮಾರ್ಗದಿಂದ ದೂರವಿರುವಂತೆ ವ್ಯಾಪಾರಿಗಳಿಗೆ ತಿಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 
ಶಿವಾಜಿನಗರದ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ನೂರಾರು ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಕೂಡಲೇ ತೆರವುಗೊಳಿಸುವಂತೆ ಪಾದಚಾರಿಯೊಬ್ಬರು ದೂರು ನೀಡಿದ್ದರು. ಹೀಗಾಗಿ ನಾವು ಸ್ಥಳಕ್ಕೆ ತೆರಳಿ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವ ಕೆಲಸ ಮಾಡಿದ್ದೇವೆ. ಆದರೆ, ಗುಂಪಿನಲ್ಲಿ ಬಂದ ಕೆಲ ವ್ಯಕ್ತಿಗಳು ಪೊಲೀಸರನ್ನೇ ನಿಂದಿಸಲು ಆರಂಭಿಸಿದರು. ಮಾತಿನ ಚಕಮಕಿ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಮಾತಿನ ಚಕಮಕಿ ನಡೆಸಿದ್ದ ವ್ಯಕ್ತಿಗೆ ಥಳಿಸಿದರು. ಈ ಘಟನೆಯ ದೃಶ್ಯವನ್ನು ದಾರಿಯಲ್ಲಿ ಹೋಗುತ್ತಿದ್ದವರು ವಿಡಿಯೋ ಮಾಡಿಕೊಂಡು ಮಾಧ್ಯಮಗಳಿಗೆ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಸಾದಿಖ್ ಎಂ ಎಂಬುವವರು ಮಾತನಾಡಿ, ಶಿವಾಜಿನಗರ ಸಂಚಾರಿ ಪೊಲೀಸ್ ಠಾಣೆ ಇನ್ಸ್'ಪೆಕ್ಟರ್ ಎಡ್ವಿನ್ ಪ್ರದೀಪ್ ಎಂಬುವವರು ಸತೀಶ್ ಎಂಬುವವರಿಗೆ ಥಳಿಸಿದ್ದರು. ಸತೀಶ್ ಅವರು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಿಕೊಂಡಿದ್ದರು. ಈ ವೇಳೆ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದ್ದು, ಪಾದಚಾರಿ ಮಾರ್ಗದಿಂದ ದೂರವಿರುವಂತೆ ತಿಳಿಸಿದರು ಎಂದು ಹೇಳಿದ್ದಾರೆ. 
ಬೀದಿ ವ್ಯಾಪಾರಿಗಳಿಗೆ ಕಿರುಕುಳ ನೀಡುವ ಉದ್ದೇಶ ಪೊಲೀಸರಿಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. 
ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೀದಿ ವ್ಯಾಪಾರಿಗಳು ನೂರಾರು ಸಂಖ್ಯೆಯಲ್ಲಿ ಠಾಣೆ ಮುಂದೆ ಸೇರಿ ಪ್ರತಿಭಟನೆ ನಡೆಸಿ, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 6.30ರವರೆಗೂ ನಡೆಯಿತು. ಈ ವೇಳೆ ಠಾಣೆಗೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಾಪಾರಿಗಳ ಮನವೊಲಿಸಿ, ವಿಡಿಯೋ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com