ಬಿಬಿಎಂಪಿ ಮೇಯರ್ ಆಯ್ಕೆಗೆ ಮುಹೂರ್ತ ಫಿಕ್ಸ್; ಸೆ.28ಕ್ಕೆ ಚುನಾವಣೆ

ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಮುಹೂರ್ತ ನಿಗದಿಯಾಗಿದ್ದು, ಸೆಪ್ಟೆಂಬರ್ 28 ರಂದು ಚುನಾವಣೆ ನಡೆಯಲಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಮುಹೂರ್ತ ನಿಗದಿಯಾಗಿದ್ದು, ಸೆಪ್ಟೆಂಬರ್ 28 ರಂದು ಚುನಾವಣೆ ನಡೆಯಲಿದೆ. 
ಮೇಯರ್ ಚುನಾವಣೆ ಕುರಿತಂತೆ ಪ್ರಾದೇಶಿಕ ಆಯುಕ್ತ ಶಿವಪ್ರಸಾದ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದು, ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದ್ದು, ಈಗಾಗಲೇ ಮೇಯರ್ ಸ್ಥಾನಕ್ಕೆ ಭಾರೀ ಪೈಪೋಟಿಗಳು ಆರಂಭವಾಗಿವೆ. 
ಮೇಯರ್ ಸಂಪತ್ ರಾಜ್ ಹಾಗೂ ಉಪ ಮೇಯರ್ ಪದ್ಮಾವತಿಯವರ  ಅಧಿಕಾರಾವಧಿ ಈ ತಿಂಗಳಿ ಅಂತ್ಯದಲ್ಲಿ ಮುಕ್ತಾಯವಾಗಲಿದ್ದು, ಈ ಬಾರಿ ಆಯ್ಕೆ ಆಗುವ ಮೇಯರ್ ಈ ಅವಧಿಯ ಮೂರನೇ ಮೇಯರ್ ಆಗಲಿದ್ದಾರೆ. 
ಸೆ.28ರಂದು ಬೆಳಿಗ್ಗೆ 11.30ರ ಸುಮಾರಿಗೆ ಮೇಯರ್ ಆಯ್ಕೆ ಚುನಾವಣೆ ನಡೆಯಲಿದ್ದು, ಬಿಬಿಎಂಪಿ ಸದಸ್ಯರು, ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ಮೇಲ್ಮನೆ ಸದಸ್ಯರು ಸೇರಿ ಒಟ್ಟು 259 ಮಂದಿ ಜನಪ್ರತಿನಿಧಿಗಳು ಮೇಯರ್ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ. ಮೇಯರ್ ಆಗಲು ಒಟ್ಟು 130 ಮತಗಳನ್ನು ಗಳಿಸಬೇಕಿದೆ. 
ಬಿಬಿಎಂಪಿಯಲ್ಲಿ ಒಟ್ಟು 198 ಸದಸ್ಯರಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಶಾಸಕರು, 5 ಲೋಕಸಭಾ ಸದಸ್ಯರಿದ್ದಾರೆ. ಇನ್ನು ಬಿಬಿಎಂಪಿಯಲ್ಲಿ ಅತೀ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಪಕ್ಷದಲ್ಲಿ 77 ಸದಸ್ಯರಿದ್ದರೆ, ಬಿಜೆಪಿಯಲ್ಲಿ 100 ಸದಸ್ಯರಿದ್ದಾರೆ. ಜೆಡಿಎಸ್ ನಲ್ಲಿ 17 ಸದಸ್ಯರು ಹಾಗೂ 7 ಪಕ್ಷೇತರ ಸದಸ್ಯರಿದ್ದಾರೆ. 
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಇದೀಗ ಜೆಡಿಎಸ್ ತನಗೆ ಮೇಯರ್ ಪಟ್ಟ ನೀಡುವಂತೆ ಆಗ್ರಹಿಸುತ್ತಿದೆ. ಆದರೆ, ಇದಕ್ಕೆ ಕಾಂಗ್ರೆಸ್ ನಕಾರ ವ್ಯಕ್ತಪಡಿಸಿದೆ. 
ಸ್ಥಳೀಯ ಚುನಾವಣಾ ಫಲಿತಾಂಶ ನಮಗೆ ಕೊಂಚ ವಿಶ್ವಾಸವನ್ನು ನೀಡಿದೆ. ಸೋಲನ್ನು ನಾವು ಬಯಸುವುದಿಲ್ಲ. ಈ ಬಾರಿಯ ಮೇಯರ್ ಪಟ್ಟ ಕಾಂಗ್ರೆಸ್ ಪಾಲಿಗೆ ಸೇರಲಿದೆ. ರಾಜ್ಯದ ಉನ್ನತ ಸ್ಥಾನವಾದ ಮುಖ್ಯಮಂತ್ರಿ ಸ್ಥಾನವನ್ನೇ ನಾವು ಜೆಡಿಎಸ್'ಗೆ ನೀಡಿದ್ದೇವೆ. ಇದೀಗ ಮೇಯರ್ ಸ್ಥಾನವನ್ನೂ ಅವರಿಗೆ ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com