ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಉದ್ಯಮಿ ತಂದೆಯನ್ನೇ ಕೊಲೆ ಮಾಡಿದ ಮಗಳು

ಪ್ರೀತಿಗೆ ಅಡ್ಡಿಪಡಿಸಿದ್ದ ತಂದೆಯನ್ನು 15 ವರ್ಷದ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ, ಶವವನ್ನು ಶೌಚಾಲಯಕ್ಕೆ ತಳ್ಳಿ ಬೆಂಕಿಹಚ್ಚಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಜೈಕುಮಾರ್ ಜೈನ್
ಜೈಕುಮಾರ್ ಜೈನ್
Updated on: 

ಬೆಂಗಳೂರು: ಪ್ರೀತಿಗೆ ಅಡ್ಡಿಪಡಿಸಿದ್ದ ತಂದೆಯನ್ನು 15 ವರ್ಷದ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ, ಶವವನ್ನು ಶೌಚಾಲಯಕ್ಕೆ ತಳ್ಳಿ ಬೆಂಕಿಹಚ್ಚಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

ರಾಜಾಜಿನಗರದ 5ನೇ ಬ್ಲಾಕ್ ನ ಬಟ್ಟೆ ವ್ಯಾಪಾರಿ ಜೈ ಕುಮಾರ್ ಜೈನ್(41) ಅವರನ್ನು ಕೊಲೆಗೈದಿದ್ದ 15 ವರ್ಷದ ಪುತ್ರಿ ಹಾಗೂ ಆಕೆಯ ಪ್ರಿಯಕರ ಪ್ರವೀಣ್ (18) ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಬಾಷ್ಯವೃತ್ತದ ಬಳಿ ಉದ್ಯಮಿ ಕೊಲೆಯಾಗಿರುವುದರ ಕುರಿತು ಭಾನುವಾರ ವರದಿಯಾಗಿತ್ತು.

ತಮ್ಮ ಮಗಳು ಪ್ರವೀಣ್ ಎಂಬಾತನ ಜೊತೆಗೆ ದೂರವಾಣಿಯಲ್ಲಿ ಮಾತನಾಡುವುದು, ಒಟ್ಟಿಗೆ ಓಡಾಡುವುದನ್ನು ಕಂಡಿದ್ದ ಜೈಕುಮಾರ್ ಜೈನ್ ಹಾಗೂ ಪತ್ನಿ ಪೂಜಾದೇವಿ ಆಕೆಗೆ ಬೈದು ಬುದ್ಧಿ ಹೇಳಿದ್ದರು. ಆತನೊಂದಿಗೆ ಮಾತನಾಡದಂತೆ ಎಚ್ಚರಿಸಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಆಕ್ರೋಶಕೊಂಡ ಆಕೆ ಪ್ರಿಯಕರನ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ:
ಪಾಂಡಿಚೆರಿ ಮೂಲದ ಜೈ ಕುಮಾರ್ ಜೈನ್, ರಾಜಾಜಿನಗರದ 5ನೇ ಬ್ಲಾಕ್ ನಲ್ಲಿ ಪತ್ನಿ ಪೂಜಾದೇವಿ 12 ವರ್ಷದ ಮಗ ಹಾಗೂ 15 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ತಮ್ಮ ಸಂಬಂಧಿ ಜೊತೆ ದಿಲೀಪ್ ಅಪೆರೆಲ್ಸ್ ಬಟ್ಟೆ ಅಂಗಡಿ ನಡೆಸುತ್ತಿದ್ದರು.

ಆಗಸ್ಟ್ 17ರಂದು ಬೆಳಿಗ್ಗೆ ಪೂಜಾದೇವಿ ತಮ್ಮ ಮಗನೊಂದಿಗೆ ಪಾಂಡಿಚೆರಿಯಲ್ಲಿದ್ದ ತಮ್ಮ ಸಹೋದರನ ಮನೆಗೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ಹೀಗಾಗಿ ಮನೆಯಲ್ಲಿ ತಂದೆ ಜೈ ಕುಮಾರ್ ಹಾಗೂ ಅವರ ಪುತ್ರಿ ಮಾತ್ರ ಇದ್ದರು.

ಭಾನುವಾರ ಬೆಳಿಗ್ಗೆ 9ರ ಸುಮಾರಿಗೆ ಅವರು ನೆಲೆಸಿದ್ದ ಮನೆಯಿಂದ ದಟ್ಟವಾದ ಹೊಗೆ ಕಂಡುಬಂದಿದ್ದು, ಕೂಡಲೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು.
ಶೌಚಾಲಯದಲ್ಲಿ ಸಿಬ್ಬಂದಿ ಬೆಂಕಿ ನಂದಿಸುವಾಗ ಉರಿಯುತ್ತಿದ್ದ ಶವ ಪತ್ತೆಯಾಗಿದೆ. ಈ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಇದೊಂದು ಕೊಲೆ ಎಂದು ಶಂಕಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ, ಜೈಕುಮಾರ್ ಜೈನ್ ಅವರ ಪುತ್ರಿಗೂ ಸುಟ್ಟಗಾಯಗಳಾಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದು ತಿಳಿದಿದ್ದು, ನಂತರ ಆಕೆಯ ವಿಚಾರಣೆಯನ್ನು ನಡೆಸಿದ್ದಾರೆ.

ಆಗ ಆಕೆ ನಾನು ಹಾಗೂ ಪ್ರವೀಣ್ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಇಬ್ಬರು ಪ್ರೀತಿಸುತ್ತಿದ್ದೇವು. ಒಟ್ಟಿಗೆ ಶಾಲೆಯಲ್ಲಿ ಓಡಾಡುವುದು, ದೂರವಾಣಿಯಲ್ಲಿ ಮಾತನಾಡುವುದನ್ನು ಕಂಡು ತಂದೆ - ತಾಯಿ, ಮೊಬೈಲ್ ಕಿತ್ತುಕೊಂಡು ಹಲವು ಬಾರಿ ಮಾನಸಿಕವಾಗಿ ಹಿಂಸೆ ನೀಡಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಂದೆಗೆ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಕುಡಿಸಿ, ಪ್ರಜ್ಞೆ ತಪ್ಪಿಸಿದೆ. ನಂತರ, ಸ್ನೇಹಿತ ಪ್ರವೀಣನನ್ನು ಕರೆಸಿ ಕೊಲೆ ಮಾಡಿ, ಕೃತ್ಯವನ್ನು ಮರೆಮಾಚಲು ಮೃತದೇಹವನ್ನು ಶೌಚಾಲಯಕ್ಕೆ ಹಾಕಿ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com