
ಬಳ್ಳಾರಿ: ಪಂದ್ಯಾವಳಿ ನೋಡುತ್ತಿದ್ದ ಸಂದರ್ಭದಲ್ಲೇ ಕ್ರೀಡಾಂಗಣದ ಸಜ್ಜೆ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಸಿರಗುಪ್ಪದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪದಲ್ಲಿ ಶುಕ್ರವಾರ ಕ್ರೀಡಾಕೂಟ ನಡೆಯುತ್ತಿದ್ದ ವೇಳೆ ವೀಕ್ಷಣಾ ಗ್ಯಾಲರಿಯ ತಡೆಗೋಡೆ ಹಾಗೂ ಸಜ್ಜಾ ಕುಸಿದು ಇಬ್ಬರು ಮೃತ ಪಟ್ಟಿದ್ದಾರೆ. ಅಂತೆಯೇ ಘಟನೆಯಲ್ಲಿ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬಳ್ಳಾರಿಯ ಸಿರಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ಹಚ್ಚೊಳ್ಳಿ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ನಗರದ ನಿವಾಸಿ ಶಿವಕುಮಾರ್ (35 ವರ್ಷ) ಸ್ಥಳೀಯ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಕೆ.ಬೆಳಗಲ್ಲು ಗ್ರಾಮದ ರಾಮು (18 ವರ್ಷ) ಮೃತಪಟ್ಟಿದ್ದಾರೆ. ಕ್ರೀಡಾಕೂಟದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿದ್ದಾಗ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕ ಮಕಿ ಆರಂಭಗೊಂಡಿತು. ಆಗ ನೂರಾರು ವಿದ್ಯಾರ್ಥಿ ಗಳು ಸ್ಟೇಡಿಯಂನ ವೀಕ್ಷಣಾ ಗ್ಯಾಲರಿಯ ಮೇಲ್ಭಾಗದಲ್ಲಿ ಜಮಾಯಿಸಿ, ಪರಸ್ಪರ ವಾಗ್ವಾದದಲ್ಲಿ ತೊಡಗಿದರು.
ಈ ವೇಳೆ ಭಾರ ಹೆಚ್ಚಿದ್ದರಿಂದ ತಡೆಗೋಡೆ ಮತ್ತು ಸಜ್ಜಾ ಕುಸಿದು ಬಿದ್ದು, ವಿದ್ಯಾರ್ಥಿಗಳು ಕೆಳಗೆ ಬಿದ್ದರು. ಸ್ಟೇಡಿಯಂನ ಹಿಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ಶಿವಕುಮಾರ್ ಮೇಲೆಯೇ ಸಜ್ಜಾ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ವಿದ್ಯಾರ್ಥಿ ರಾಮುಲುವನ್ನು ಬಳ್ಳಾರಿ ವಿಮ್ಸ್ ಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ 16 ವಿದ್ಯಾರ್ಥಿಗಳನ್ನು ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
1997ರಲ್ಲಿ ಈ ಕಟ್ಟಡ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement