ಮಂಗಳೂರು ಹಿಂಸಾಚಾರ: ಕೇಂದ್ರಕ್ಕೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಹಾಗೂ ಹಿಂಸಾಚಾರದ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಗುರುವಾರ ವರದಿ ಸಲ್ಲಿಸಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಹಾಗೂ ಹಿಂಸಾಚಾರದ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಗುರುವಾರ ವರದಿ ಸಲ್ಲಿಸಿದೆ. 

ಬೆಂಗಳೂರು, ಕಲಬುರಗಿ, ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪೌರತ್ವ ಕಾಯ್ದೆ ಜಾರಿಗೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗೋಲಿಬಾರ್'ಗೆ ಇಬ್ಬರು ಮೃತಪಟ್ಟಿದ್ದಾರೆ. 

ಇನ್ನೊಂದೆಡೆ ಬೆಂಗಳೂರಿನಲ್ಲಿ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಪ್ರಮುಖ ಗಣ್ಯರ ಬಂಧನವಾಗಿದೆ. ಈ ಎಲ್ಲಾ ಘಟನಾವಳಿಗಳನ್ನು ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. 

ತಮ್ಮ ನಿವಾಸದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ  ಅವರು, ಸಂಜ ಮತ್ತೆ ಗೃಹ ದಳ ಮುಖ್ಯಸ್ಥ ಕಮಲ್ ಪಂತ್ ಅವರಿಂದ ಎರಡನೇ ಬಾರಿಗೆ ರಾಜ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಅಧಿಕಾರಿಗಳ ಮಾಹಿತಿ ಕ್ರೋಡೀಕರಿಸಿದ ಗೃಹ ಇಲಾಖೆಯು ಕೇಂದ್ರಕ್ಕೆ ವರದಿ ಕಳುಹಿಸಿದೆ. ಶುಕ್ರವಾರ ಸಹ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ಮುಂದುವರೆಯುವ ಸಾಧ್ಯತೆಗಳಿದ್ದು, ಅಗತ್ಯ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com