
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದ ಇಬ್ಬರದ್ದೂ ಯೋಜಿತ ಕೊಲೆ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಲ್-ಇಹ್ಸಾನ್ ಮಸೀದಿ ಮುಖಂಡರು, ಗೋಲಿಬಾರ್ ನಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದು, ಇದು ಬಿಜೆಪಿ ಸರ್ಕಾರ ನಡೆಸಿದ ಯೋಜಿತ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ 100ಕ್ಕಿಂತಲೂ ಹೆಚ್ಚು ಜನರು ಇರಲಿಲ್ಲ. ಹೀಗಾಗಿ ಸ್ಥಳದಲ್ಲಿ ಲಾಠಿಚಾರ್ಜ್ ಹಾಗೂ ಗೋಲಿಬಾರ್ ನಡೆಸುವ ಅಗತ್ಯವಿರಲಿಲ್ಲ. ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಇದು ನಮ್ಮಲ್ಲಿ ಭೀತಿ ಸೃಷ್ಟಿ ಮಾಡಿತ್ತು. ನಮ್ಮ ಭಯ ಕೂಡ ಇದೀಗ ನಿಜವಾಯಿತು. ಪೊಲೀಸರೇ ಹಿಂಸಾಚಾರವನ್ನು ಸೃಷ್ಟಿ ಮಾಡಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸಿದರು. ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಯಾಗಬೇಕೆಂದು ಮುಸ್ಲಿಂ ಬರಹಗಾರರ ವೇದಿಕೆ ಅಧ್ಯಕ್ಷ ಉಮರ್ ಯು.ಹೆಚ್ ಆಗ್ರಹಿಸಿದ್ದಾರೆ.
ವಕೀಲ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯ ಅಶ್ರಕ್ ಕೆ ಅದ್ನಾದ್ ಮಾತನಾಡಿ, ಪ್ರತಿಭಟನೆ ವೇಳೆ ಪೊಲೀಸರು ಸ್ಥಳದಿಂದ ತೆರಳುವಂತೆ ಘೋಷಣೆಗಳನ್ನು ಮೊದಲು ಮಾಡಬೇಕಿತ್ತು. ಬಳಿಕವಷ್ಟೇ ಲಾಠಿಚಾರ್ಜ್ ಮಾಡಬೇಕು. ಅದನ್ನು ಬಿಟ್ಟು ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದರು. ಹೀಗಾಗಿ ಸ್ಥಳದಲ್ಲಿ ಹಿಂಸಾಚಾರ ಸೃಷ್ಟಿಯಾಗಿತ್ತು ಎಂದು ತಿಳಿಸಿದ್ದಾರೆ.
ಈ ಆರೋಪವನ್ನು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿರಸ್ಕರಿಸಿದ್ದಾರೆ. ಪ್ರತಿಭಟನಾಕಾರರು ಮೊದಲು ಮಂಗಳೂರು ಉತ್ತರ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಅಲ್ಲದೆ, ಪೊಲೀಸರನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಸಂಘಟನೆಗಳು, ಪೊಲೀಸರನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಘಟನೆಯಲ್ಲಿ ಒಬ್ಬ ಪೊಲೀಸ್ ಕೂಡ ಗಾಯಗೊಂಡಿಲ್ಲ. ಹೀಗಿರುವಾಗ ಪೊಲೀಸರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂದು ಹೇಗೆ ಹೇಳುತ್ತಾರೆ? ಕೇವಲ ಗಲಭೆ ಉದ್ದೇಶವೇ ಇದ್ದಿದ್ದರೆ, ಯಾವುದೇ ಸಾವುಗಳೂ ಸಂಭವಿಸುತ್ತಿರಲಿಲ್ಲ ಎಂದು ತಿಳಿಸಿವೆ.
Advertisement