ನಾಳೆ ಭಾರತ್ ಬಂದ್ ಗೆ ಓಲಾ, ಉಬರ್ ನೈತಿಕ ಬೆಂಬಲ; ಟ್ಯಾಕ್ಸಿ, ಆಟೋ ಸೇವೆಯಲ್ಲೂ ವ್ಯತ್ಯಯ?

ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆ ಜನವರಿ 8 ಮತ್ತು 9ರಂದು ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿದ್ದು, ಓಲಾ, ಉಬರ್ ನೈತಿಕ ಬೆಂಬಲ ಸೂಚಿಸಿರುವ ಹಿನ್ನಲೆಯಲ್ಲಿ ಟ್ಯಾಕ್ಸಿ, ಆಟೋ ಸೇವೆಯಲ್ಲಿ ವ್ಯತ್ಯವಾಗುವ ಸಾಧ್ಯತೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆ ಜನವರಿ 8 ಮತ್ತು 9ರಂದು ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿದ್ದು, ಓಲಾ, ಉಬರ್ ನೈತಿಕ ಬೆಂಬಲ ಸೂಚಿಸಿರುವ ಹಿನ್ನಲೆಯಲ್ಲಿ ಟ್ಯಾಕ್ಸಿ, ಆಟೋ ಸೇವೆಯಲ್ಲಿ ವ್ಯತ್ಯವಾಗುವ ಸಾಧ್ಯತೆ.
ಕೆಲ ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ಬಂದ್ ಗೆ ಕೇವಲ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಕೆಲ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದರೂ ಮತ್ತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಣೆ ಮಾಡಿವೆ. ಆದರೆ ಬಂದ್ ನಲ್ಲಿ ತಾವು ಪಾಲ್ಗೊಳ್ಳುವುದಿಲ್ಲ. ತಮ್ಮ ಸಂಘಟನೆಯ ಟ್ಯಾಕ್ಸಿ ಮತ್ತು ಆಟೋ ಸೇವೆ ಎಂದಿನಂತೆ ಇರಲಿವೆ ಎಂದು ಘೋಷಣೆ ಮಾಡಿವೆ. ಹೀಗಾಗಿ ಆಟೋ ಮತ್ತು ಟ್ಯಾಕ್ಸಿ ಸೇವೆ ಸಂಪೂರ್ಣ ಬಂದ್ ಆಗಿದಿದ್ದರೂ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದ್ದು, 12 ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಬೀದಿಗಿಳಿಯಲಿವೆ. ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬುಧವಾರ ಸಂಜೆ ಐದು ಗಂಟೆಯವರೆಗೂ ಬಂದ್ ನಡೆಯಲಿದ್ದು, ಈಗಾಗಲೇ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಸಮ್ಮಿಶ್ರ ಸರ್ಕಾರವೂ ಬೆಂಬಲ ಕೊಟ್ಟಿದೆ ಎಂದು ತಿಳಿದುಬಂದಿದೆ.
ಸರ್ಕಾರದ ನಿಲುವಿನ ಮೇಲೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇವೆ ನಿರ್ಧಾರ
ಇನ್ನು ನಾಳಿನ ಬಂದ್ ಗೆ ರಾಜ್ಯ ಸರ್ಕಾರ ಪರೋಕ್ಷ ಬೆಂಬಲ ನೀಡಿದರೆ ಮಾತ್ರ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಸೇವೆಗಳು ಸಂಪೂರ್ಣ ಬಂದ್ ಆಗಲಿವೆ. ರಾಜ್ಯ ಸರ್ಕಾರ ಬಂದ್ ಗೆ ಬೆಂಬಲ ನೀಡದಿದ್ದರೆ ಬಸ್ ಸೇವೆ ಮುಂದುವರೆಯುವ ಸಾಧ್ಯತೆ ಇದೆ.
ಇನ್ನು ಮುಷ್ಕರದಲ್ಲಿ ಬ್ಯಾಂಕ್ ನೌಕರರು ಕೂಡ ಪಾಲ್ಗೊಳ್ಳುತ್ತಿದ್ದು, ಹೀಗಾಗಿ ಬ್ಯಾಂಕ್ ಸೇವೆ ಸ್ಥಗಿತವಾಗಲಿದೆ. ಎಪಿಎಂಸಿ ಲಾರಿ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರಿಂದ ಎಪಿಎಂಸಿ ಕಾರ್ಯಚಟುವಟಿಕೆಗಳು ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com