ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಗಳ ಸರಣಿ ಅಪಘಾತದಿಂದ ಆಘಾತಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸುತ್ತಿದ್ದ ಕಾರು ಸೇರಿದಂತೆ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಮೂರು ಪೊಲೀಸ್ ವಾಹನಗಳು ಮತ್ತು ಎರಡು ಖಾಸಗಿ ವಾಹನಗಳು ಜಖಂಗೊಂಡಿದ್ದವು. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಆದರೆ ಬೆಂಗಾವಲು ಕಾರಿನಲ್ಲಿದ್ದ ಮಂಡ್ಯ ಡಿಎಆರ್ನ ಎಆರ್ಎಸ್ಐ ಆಗಿದ್ದ ಮರೀಗೌಡ (56) ಅವರು ತೀವ್ರ ಆಘಾತಕ್ಕೊಳಗಾಗಿದ್ದರು.
ಮರೀಗೌಡ ಅವರು ಸಂಜೆ ಮಂಡ್ಯ ಪೊಲೀಸ್ ಕ್ವಾಟ್ರಸ್ ನ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.