ಕೆ.ಆರ್.ಮಾರುಕಟ್ಟೆ: ಬಿಬಿಎಂಪಿ ಅಧಿಕಾರಿಗಳಿಂದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ನಗರದ ಹೃದಯಭಾಗದಲ್ಲಿರುವ ಕೃಷ್ಣ ರಾಜೇಂದ್ರ ಮಾರುಕಟ್ಟೆ (ಕೆಆರ್ ಮಾರುಕಟ್ಟೆ)ಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.
ಕೆಆರ್ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ
ಕೆಆರ್ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ
ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಕೃಷ್ಣ ರಾಜೇಂದ್ರ ಮಾರುಕಟ್ಟೆ (ಕೆಆರ್ ಮಾರುಕಟ್ಟೆ)ಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.
ಹೈಕೋರ್ಟ್ ನಿರ್ದೇಶನದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಶುಕ್ರವಾರ ಕೆ.ಆರ್.ಮಾರುಕಟ್ಟೆಯ ಅನಧಿಕೃತ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿದರು. ಅಗ್ನಿ ಶಾಮಕ ವಾಹನಗಳು ಹಾಗೂ ಜನರ ಸಂಚಾರಕ್ಕೆ ಅಡ್ಡಿಯಾಗುವಂತೆ ಸಾರ್ವಜನಿಕ ಪ್ರದೇಶ ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿರ್ಮಿಸಲಾಗಿದ್ದ ಕಟ್ಟಡಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಿರ್ದೇಶನದ ಮೇರೆಗೆ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿದರು. 
ಕೆ.ಆರ್.ಮಾರುಕಟ್ಟೆಯಲ್ಲಿ ಒಟ್ಟು 2012 ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಅಂಗಡಿಗಳು ಸುತ್ತಮುತ್ತಲಿನ ಖಾಲಿ ಪ್ರದೇಶ ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿವೆ. ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಶೇ.60ರಿಂದ 70ರಷ್ಟು ಪ್ರದೇಶ ಒತ್ತುವರಿಯಾಗಿದೆ. ತೆರವು ಕಾರ್ಯಾಚರಣೆ ಪೂರ್ಣಗೊಂಡ ನಂತರ, ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಹೈಕೋರ್ಟ್ ಆದೇಶ ಹಾಗೂ ಬಿಬಿಎಂಪಿ ನಿಯಮದ ಅನುಸಾರ ಪ್ರತಿ ಅಂಗಡಿಯೂ ಅಗ್ನಿ ಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 
ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ
ನಗರದ ಕೆ.ಆರ್. ಮಾರುಕಟ್ಟೆಯ ಹೊರ ಮತ್ತು ಒಳ ಆವರಣದಲ್ಲಿನ ಅನಧಿಕೃತವಾಗಿ ಅಂಗಡಿಗಳ ಮುಂದೆ ಒತ್ತುವರಿ ಮಾಡಿಕೊಂಡು ಅಳವಡಿಸಲಾಗಿದ್ದ ನಾಮಫಲಕಗಳು ಮತ್ತಿತರ ಭಾಗಗಳನ್ನು ತೆರವುಗೊಳಿಸಿರುವ ಬಿಬಿಎಂಪಿ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದೆ. ಕೆ.ಆರ್. ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಇಂತಹ ಒತ್ತುವರಿ ಕಾರ್ಯಾಚರಣೆ ನಡೆದಿದೆ. ಇಂದು ಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ 6 ಜೆಸಿಬಿಗಳ ಸಹಾಯದಿಂದ ಮಾರುಕಟ್ಟೆಯಲ್ಲಿರುವ ಗ್ರೈನ್ ರಸ್ತೆ ಮತ್ತು ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಅವೆನ್ಯೂ ರಸ್ತೆಯಲ್ಲಿನ ಕೆಳ ಅಂಗಡಿಗಳ ಮುಂದೆ ಅನಧಿಕೃತವಾಗಿ ಹಾಕಲಾಗಿದ್ದ ಭಾಗಗಳನ್ನು ತೆರವುಗೊಳಿಸಲಾಯಿತು.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಕೆ.ಆರ್. ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ನಾಳೆಯಿಂದಲೇ ಒತ್ತುವರಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದರು. ಮಾರುಕಟ್ಟೆಯ ಆವರಣ ಮತ್ತು ಮೊದಲ ಅಂತಸ್ತುಗಳಲ್ಲಿ ಅಂಗಡಿಗಳ ಮುಂದಿನ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಸುಮಾರು ಸಾವಿರಕ್ಕೂ ಹೆಚ್ಚು ಅಂಗಡಿಗಳ ಮುಂದೆ ಅಳವಡಿಸಲಾಗಿದ್ದ ಬೋರ್ಡ್‌ಗಳನ್ನು ಮತ್ತಿತರ ಭಾಗಗಳನ್ನು ಕಿತ್ತುಹಾಕಿ ಟ್ರಾಕ್ಟರ್‌ಗಳಲ್ಲಿ ತುಂಬಿಸಿ ಸಾಗಿಸಲಾಯಿತು.
ಅಂಗಡಿಗಳ ಮುಂಭಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಸಜ್ಜೆಗಳು, ಬೋರ್ಡ್‌ಗಳು ಹಾಗೂ ನೆರಳಿಗಾಗಿ ನಿರ್ಮಿಸಿಕೊಂಡಿದ್ದ ಟಾರ್ಪೆಲ್ ಮತ್ತಿತರ ಭಾಗಗಳನ್ನು ಜೆಸಿಬಿ ಯಂತ್ರಗಳು ಕಿತ್ತುಹಾಕಿದವು. ಬಿಬಿಎಂಪಿ, ಅಗ್ನಿಶಾಮಕದಳ, ನಗರ ಪೊಲೀಸ್ ಸಂಚಾರ ವಿಭಾಗ, ಮಾರ್ಷೆಲ್‌ಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಮಧ್ಯಾಹ್ನದವರೆಗೂ ಕಾರ್ಯಾಚರಣೆಯನ್ನು ನಡೆಸಿದರು. ಸಂಜೆವರೆಗೂ ಕಾರ್ಯಾಚರಣೆ ನಡೆಯಲಿದ್ದು, ಒಂದು ವೇಳೆ ಮುಗಿಯದಿದ್ದಲ್ಲಿ ನಾಳೆಯೂ ಮುಂದುವರಿಯಲಿದೆ. ಸುಮಾರು 300 ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು, ಕಾರ್ಯಾಚರಣೆ ಮೇಲೆ ಯಾರನ್ನು ಹತ್ತಿರ ಬಿಡದೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು. ಒತ್ತುವರಿ ಕಾರ್ಯಾಚರಣೆ ವೇಳೆ ಮಾರುಕಟ್ಟೆಯ ಆವರಣದಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಕೂಡ ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿಯ ಮಾರುಕಟ್ಟೆ ವಿಭಾಗದ ವಿಶೇಷ ಆಯುಕ್ತ ಎಸ್.ಜಿ.ರಾಘವೇಂದ್ರ ಹಾಗೂ ವಿಶೇಷ ಆಯುಕ್ತ  ರಣದೀಪ್ ಉಪಸ್ಥಿತರಿದ್ದರು. ಬಿಬಿಎಂಪಿಯ ನೂರಾರು ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್‍ ಪಡೆ ಸೇರಿ 500ಕ್ಕೂ ಹೆಚ್ಚು ಜನರ ತಂಡ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com