ಗಾಯದ ಮೇಲೆ ಬರೆ: ಸಾಲ ತೀರಿಸುವಂತೆ ಪ್ರವಾಹ ಸಂತ್ರಸ್ತರಿಗೆ ಬ್ಯಾಂಕ್ ನೋಟಿಸ್

ಪ್ರವಾಹದ ಬಳಿಕ ಹೊಸ ಬದುಕು ರೂಪಿಸಿಕೊಳ್ಳಲು ಸಂತ್ರಸ್ತರು ಹೆಣಗಾಡುತ್ತಿರುವ ನಡುವಲ್ಲೇ ಸಾಲ ತೀರಿಸುವಂತೆ ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್ ನವರು ಎಚ್ಚರಿಕೆ ನೋಟಿಸ್ ಜಾರಿ ಮಾಡಿರುವುದು, ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಪ್ರವಾಹದ ಬಳಿಕ ಹೊಸ ಬದುಕು ರೂಪಿಸಿಕೊಳ್ಳಲು ಸಂತ್ರಸ್ತರು ಹೆಣಗಾಡುತ್ತಿರುವ ನಡುವಲ್ಲೇ ಸಾಲ ತೀರಿಸುವಂತೆ ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್ ನವರು ಎಚ್ಚರಿಕೆ ನೋಟಿಸ್ ಜಾರಿ ಮಾಡಿರುವುದು, ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. 

ರಾಮದುರ್ಗ ತಾಲೂಕಿನ ಹಿರೇಹಂಪಿಹೊಳಿ ಗ್ರಾಮದ ನಿವಾಸಿಗಳಾಗಿರುವ ಕೆಲ ಮಹಿಳೆಯರು ಸ್ವಸಹಾಯ ಸಂಘಗಳಿಂದ ಹಾಗೂ ಪುರುಷರು ವಿವಿಧ ಫೈನಾನ್ಸ್ ಗಳಲ್ಲಿ ಸಾಲ ಮಾಡಿ ಕೃಷಿ ಮತ್ತು ಹೈನುಗಾರಿಕೆಗೆ ಬಳಕೆ ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಸಾಲ ಪಾವತಿಸಿದ್ದಾರೆ. ಆದರೆ, 4 ತಿಂಗಳ ಹಿಂದೆ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಗ್ರಾಮದ ಜನರ ಬದುಕು ಬೀದಿಗೆ ಬಂದಿದೆ. ಭಾರೀ ಪ್ರವಾಹಕ್ಕೆ ಇಡೀ ಗ್ರಾಮವೇ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. 

ಎರಡು ತಿಂಗಳುಗಳಿಗಿಂತಲೂ ಹೆಚ್ಚು ಸಮಯ ಅಲ್ಲಿನ ಜನರು ನಿರಾಶ್ರಿತ ಕೇಂದ್ರಗಳಲ್ಲಿ ವಾಸವಿದ್ದರು. ಇದೀಗ ಗ್ರಾಮಕ್ಕೆ ವಾಪಸ್ಸಾಗಿದ್ದು, ಮನೆಗಳನ್ನು ದುರಸ್ತಿ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಈ ನಡುವಲ್ಲೇ ಖಾಸಗಿ ಬ್ಯಾಂಕ್ ಗಳು ಹಾಗೂ ಫೈನಾನ್ಸ್ ಕಂಪನಿಗಳು ಸಂತ್ರಸ್ತರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. 

ಸಾಲ ಮರುಪಾವತಿ ಮಾಡುವಂತೆ ಎಚ್ಚರಿಕೆ ನೋಟಿಸ್ ಗಳನ್ನು ಜಾರಿ ಮಾಡಿರುವ ಕಂಪನಿ ಹಾಗೂ ಬ್ಯಾಂಕ್ ಗಳು, ಸಾಲ ಪಾವತಿ ಮಾಡದೇ ಹೋದಲ್ಲಿ ಮನೆಗಳಿಗೆ ಬೀಗ ಹಾಕಿ ಜಪ್ತಿ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಆಯುಕ್ತ ಡಾ.ಎಸ್.ಬಿ.ಬೊಮ್ಮನಹಳ್ಲಿಯವರು, ಪ್ರವಾಸ ಸಂತ್ರಸ್ತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ಹಿಂಪಡೆಯುವಂತೆ ಕೂಡಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಸಂತ್ರಸ್ತರಿಗೂ ಯಾವುದೇ ರೀತಿಯ ಎಚ್ಚರಿಕೆ ಹಾಗೂ ನೋಟಿಸ್ ಗಳೂ ಬರುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com