ಐಎಂಎ ವಂಚನೆ ಪ್ರಕರಣ: ಎಸ್ಐಟಿ ವಶದಲ್ಲಿರುವ ಶಾಸಕ ರೋಷನ್ ಬೇಗ್ ತೀವ್ರ ವಿಚಾರಣೆ

ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್‍ಐಟಿ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದಲ್ಲೇ ಹಿರಿಯ ಅಧಿಕಾರಿಗಳಿಂದ ಅವರ ವಿಚಾರಣೆ ನಡೆದಿದೆ ಎನ್ನಲಾಗಿದೆ. ಅಂತೆಯೇ ರೋಷನ್ ಬೇಗ್ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಎಸ್‍ಐಟಿ ಅಧಿಕಾರಿಗಳಿಗೆ ಲಭಿಸಿದ್ದು, ಇದೇ ಕಾರಣಕ್ಕಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿ 3.30ರವರೆಗೂ ವಿಮಾನ ನಿಲ್ದಾಣದಲ್ಲಿಯೇ ಶಾಸಕರ ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ರಿಂದ ಹಣ ಪಡೆದ ಕುರಿತು ಮತ್ತು ಆ ಹಣವನ್ನು ಏನು ಮಾಡಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಇಲ್ಲ ಎಂದು ಉತ್ತರಿಸಿದ ಬೇಗ್.. ಅಧಿಕಾರಿಗಳು ತಮ್ಮನ್ನು ವಶಕ್ಕೆ ಪಡೆದ ಕಾರ್ಯವನ್ನು ಟೀಕಿಸಿದ್ದಾರೆ ಎನ್ನಲಾಗಿದೆ.
ಇದೇ 19ರಂದು ನಾನೇ ವಿಚಾರಣೆಗೆ ಖುದ್ಧು ಹಾಜರಾಗುತ್ತಿದ್ದೆ. ಈ ಬಗ್ಗೆ ಈ ಹಿಂದೆಯೂ ಕೂಡ ಹೇಳಿಕೆ ನೀಡಿದ್ದೆ. ಆದರೆ ಈ ರೀತಿ ನನ್ನನ್ನು ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದು ಬೇಗ್ ಕಿಡಿಕಾರಿದ್ದಾರೆ ಎನ್ನಲಾಗಿದೆ.
ಎಸ್‍ಐಟಿಯ ಅಧಿಕಾರಿ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆ ಗುರುವಾರ ಫಿಕ್ಸ್ ಆಗಿರುವುದರಿಂದ ಕೊನೆ ಗಳಿಗೆಯಲ್ಲಿ ದೋಸ್ತಿ ನಾಯಕರು ಮನವೊಲಿಕೆಗೆ ಮುಂದಾಗಬಹುದು ಎಂಬ ಉದ್ದೇಶದಿಂದ ರೋಷನ್ ಬೇಗ್ ಮುಂಬೈಗೆ ತೆರಳುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. 
ಇನ್ನು ಐಎಂಎ ವಂಚನೆ ಬಳಿಕ ಬಿಡುಗಡೆಯಾದ ಆಡಿಯೋದಲ್ಲಿ ಮನ್ಸೂರ್ ಖಾನ್, ರೋಷನ್ ಬೇಗ್ ಹೆಸರು ಪ್ರಸ್ತಾಪ ಆಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ ಗೆ ಎಸ್‍ಐಟಿ ನೊಟೀಸ್ ನೀಡಿತ್ತು. ಆದರೆ, ಜುಲೈ 11ರಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ಎಸ್‍ಐಟಿ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿತ್ತು. ಇಂದು ರೋಷನ್ ಬೇಗ್ ವಿಚಾರಣೆ ಹಾಜರಾಗಬೇಕಿತ್ತು. ಆದರೆ ಸದನದ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಪರಿಣಾಮ ಜುಲೈ 19 ರಂದು ವಿಚಾರಣೆಗೆ ಹಾಜರಾಗಲು ಎಸ್‍ಐಟಿ ನೋಟಿಸ್ ನೀಡಿತ್ತು ಎಂಬ ಮಾಹಿತಿ ಲಭಿಸಿದೆ. ಆದರೆ ಅವರು ಬೆಂಗಳೂರು ಬಿಟ್ಟು ತೆರಳುವ ಮಾಹಿತಿ ಅನ್ವಯ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com