ನನ್ನ ಚಾರಿತ್ರ್ಯ ವಧೆಗೆ ಯತ್ನಿಸುವ ಮುನ್ನ ನಿಮ್ಮ ಹಿನ್ನಲೆ ನೋಡಿಕೊಳ್ಳಿ: ಸ್ಪೀಕರ್ ರಮೇಶ್ ಕುಮಾರ್ ಕಿಡಿ

ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸ್ಪೀಕರ್ ರಮೇಶ್ ಕುಮಾರ್ ವಿಪಕ್ಷ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಿಎಂ ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನೆಗೆ ಉದ್ದೇಶಪೂರ್ವಕವಾಗಿಯೇ ಸ್ಪೀಕರ್ ಅವಕಾಶ ನೀಡಲಿಲ್ಲ. ವಿಶ್ವಾಸಮತ ಯಾಚನೆಯನ್ನು ಮುಂದೂಡುವ ಸಲುವಾಗಿಯೇ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂಬ ವಿಪಕ್ಷ ನಾಯಕರ ಟೀಕೆಗೆ ತೀಕ್ಷ್ಣವಾಗಿ ಕಿಡಿಕಾರಿದರು. 
ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಕುರಿತು ವಿಷಯ ಪ್ರಸ್ತಾಪ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ವಿಶ್ವಾಸಮತ ಯಾಚನೆಗೆ ನಾನು ಬೇಕೇಂದೇ ವಿಳಂಬ ಮಾಡುತ್ತಿದ್ದೇನೆ ಎಂಬ ಆರೋಪ ಸರಿಯಲ್ಲ. ಈ ಕುರಿತಂತೆ ಮಾತನಾಡುತ್ತಿರುವ ನಾಯಕರು ಮತ್ತು ಮಾಧ್ಯಮಗಳ ಬಗ್ಗೆ ನನಗೆ ಅನುಕಂಪವಿದೆ. ಯಾವುದೋ ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಡುವಂತಹ ಕಷ್ಟ ನನಗೇನೂ ಬಂದಿಲ್ಲ. ಓರ್ವ ಜವಾಬ್ದಾರಿಯುತ ಸ್ಪೀಕರ್ ಆಗಿ ನಾನು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಇತಿಹಾಸ ಪುಟ ಸೇರಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿರಬೇಕು ಎಂಬ ಮಹದಾಸೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 
ನೀವು ನಿಮ್ಮದೇ ಕಾರಣಗಳಿಂದ ನನ್ನ ಕಾರ್ಯ ವೈಖರಿಯನ್ನು ಟೀಕಿಸುತ್ತಿದ್ದೀರಿ. ಆದರೆ ನಾನು ಯಾರ ಟೀಕೆ ಟಿಪ್ಪಣಿಗಳಿಗೂ ಬಗ್ಗದೇ ಕೇವಲ ಸಂವಿಧಾನದ ಅನುಗುಣವಾಗಿ ಮಾತ್ರ ಕಾರ್ಯ ನಿರ್ವಹಿಸುತ್ತೇನೆ. ನಿಮ್ಮ ನಿಲುವುಗಳು ಅಜೆಂಡಾಗಳು ಬೇರೆ ಬೇರೆ ಇರಬಹುದು. ಆದರೆ ಆದಾವುದೂ ನನಗೆ ಸಂಬಂಧ ಪಟ್ಟಿದ್ದಲ್ಲ. ನಿಯಮಾಳಿಗಳನ್ನು ಗಾಳಿಗೆ ತೂರಿ ಯಾವುದೇ ಕಾರಣಕ್ಕೂ ನಾನು ನಿರ್ಣಯ ಕೈಗೊಳ್ಳುವುದಿಲ್ಲ. ಆದರೆ ನನ್ನ ಕಾರ್ಯ ವೈಖರಿಯನ್ನು ಟೀಕಿಸುತ್ತಿರುವವರು ಮತ್ತು ನನ್ನ ಚಾರಿತ್ರ್ಯ ವಧೆಗೆ ಯತ್ನಿಸುತ್ತಿರುವವರು ಒಮ್ಮೆ ನಿಮ್ಮ ಹಿನ್ನಲೆಯನ್ನು ನೋಡಿಕೊಳ್ಳಿ. ಸಾವಿರಾರು ಕೋಟಿ ರೂಗಳ ಒಡೆಯ ನಾನಲ್ಲ. ನನ್ನನ್ನು ಟೀಕಿಸುವ ಮುನ್ನ ನಿಮ್ಮ ಹಿನ್ನಲೆಯನ್ನು ನೋಡಿಕೊಳ್ಳಿ ಎಂದು ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com