ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವು; ಸಿಎಂ ಬಿಎಸ್ ವೈ, ಎಚ್ ಡಿ ದೇವೇಗೌಡ ಸೇರಿದಂತೆ ಗಣ್ಯರ ಸಂತಾಪ

ಕಾಫೆ ಡೇ ಮಾಲೀಕ ಸಿದ್ಧಾರ್ಥ್ ಸಾವಿಗೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕಾಫೆ ಡೇ ಮಾಲೀಕ ಸಿದ್ಧಾರ್ಥ್ ಸಾವಿಗೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿದ್ಧಾರ್ಥ್ ಸಾವು ಕುರಿತಂತೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕ ಹಾಗೂ ಉದ್ಯಮಿ ಸಿದ್ದಾರ್ಥ್ ಅವರ ಸಾವು ತೀವ್ರ ಆಘಾತ ಹಾಗೂ ಅಪಾರ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಕೂಡ ಸಂತಾಪ ಸೂಚಿಸಿದ್ದು, 'ಸಿದ್ದಾರ್ಥ್ ಅವರ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಿಜಕ್ಕೂ ಅವರ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಸಿದ್ದಾರ್ಥ್ ಅವರದ್ದು ತುಂಬಾ ಸರಳ ವ್ಯಕ್ತಿತ್ವ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಅವರು. ಈ ದಿನ ಆ ನಂದಾದೀಪ ಆರಿಹೋದ ಸುದ್ದಿ ಕೇಳಿ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಡೀ ದೇಶಕ್ಕೆ ಕಗ್ಗತ್ತಲಾವರಿಸಿದೆ. ಸುಮಾರು 35 ವರ್ಷಗಳಿಂದ ನನಗೆ ಸಿದ್ದಾರ್ಥ ಪರಿಚಯವಿದ್ದು, ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲಾ ಎಂದರೆ ನನಗೆ ನಂಬಲಸಾಧ್ಯ. ಅವರ ಈ ದಾರುಣ ಸಾವಿನ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂಧುಗಳಿಗೆ ಅವರ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ತುಂಬಲಿ ಎಂದಿದ್ದಾರೆ.
ಇನ್ನು ಈ ಹಿಂದೆ ಸಿದ್ಧಾರ್ಥ್ ಅವರ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ನೆರವು ಕೇಳಿದ್ದ ಸಂಸದೆ ಶೋಭಾ ಕರಂದ್ಲಾಜೆ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಸಿದ್ಧಾರ್ಥ್ ಅವರ ಸಾವಿನ ವಿಚಾರ ಕೇಳಿ ನಿಜಕ್ಕೂ ತೀವ್ರ ಆಘಾತವಾಗಿದೆ. ಕಾಫಿ ಉಧ್ಯಮಿ ಸಿದ್ಧಾರ್ಥ್ ಅವರ ಸಾವಿನಿಂದ ದೇಶದ ಉದ್ಯಮ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com