ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಬೆಂಗಳೂರು ಸೇರಿ ದೇಶದೆಲ್ಲೆಡೆ ಸಕಲ ಸಿದ್ಧತೆ

ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಾಳೆ(ಶುಕ್ರವಾರ) ರಾಜ್ಯ ಸೇರಿದಂತೆ ...
ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತಿರುವ ಸಂಗ್ರಹ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತಿರುವ ಸಂಗ್ರಹ ಚಿತ್ರ
ಬೆಂಗಳೂರು: ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಾಳೆ(ಶುಕ್ರವಾರ) ರಾಜ್ಯ ಸೇರಿದಂತೆ ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಗೋವಾ ಎನ್‍ಸಿಸಿ ನಿರ್ದೇಶನಾಲಯದ 8000ಕ್ಕೂ ಅಧಿಕ ಮಂದಿ ಕೆಡಟ್‍ಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಯೋಗಕ್ಷೇಮ (ವೆಲ್‍ನೆಸ್‍) ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆ ಯೋಗ ಪ್ರದರ್ಶನಕ್ಕಾಗಿ 50 ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ರಾಜ್ಯಕ್ಕೆ ಆಹ್ವಾನಿಸಿದೆ. ಈ ಮೂಲಕ ಯೋಗವನ್ನು ಜಾಗತಿಕವಾಗಿ ವಿಸ್ತರಿಸಲು ಪ್ರಯತ್ನ ನಡೆಸಿದ್ದು, ಅವರನ್ನು ರಾಯಭಾರಿಗಳಾಗಿ ಮಾಡಲಾಗಿದೆ.
ಕರ್ನಾಟಕದಲ್ಲಿ ಆಯುಷ್ ಇಲಾಖೆ ಮತ್ತು ಇತರ ಸಂಸ್ಥೆಗಳ ನೇತೃತ್ವದಲ್ಲಿ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರದಾನ ಸಮಾರಂಭ ನಡೆಯಲಿದೆ. ಶ್ವಾಸಗುರು ವಚನಾನಂದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರಿನ ಶ್ವಾಸ ಯೋಗ ಸಂಸ್ಥೆ ಹಾಗೂ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಸಹಯೋಗದಲ್ಲಿ ಯೋಗ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಸಂಜೆ ಆಯೋಜಿಸಲಾಗಿದೆ.
ಪ್ರಧಾನ ಕಾರ್ಯಕ್ರಮ ನಡೆಯುವ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಜಾರ್ಖಂಡ್‍ನ ರಾಂಚಿಯ ಪ್ರಭಾತ್ ತಾರಾ ಕ್ರೀಡಾಂಗಣದಲ್ಲಿ ಬಹುತೇಕ ಎಲ್ಲಾ ಸಿದ್ಧತೆ ಮುಗಿದಿದ್ದು, ಕಾರ್ಯಕ್ರಮ ಪ್ರಧಾನಿಯವರ ಮುಂದಾಳತ್ವದಲ್ಲಿ ನಡೆಯಲಿದೆ. ಸ್ವತಃ ಪ್ರಧಾನಿ ಯೋಗಾಭ‍್ಯಾಸ ಮಾಡಲಿದ್ದಾರೆ.
ಪ್ರಧಾನ ಸಮಾರಂಭದ ವೇದಿಕೆ ಸುಮಾರು 7 ಲಕ್ಷ ಚದರ ಅಡಿ ವಿಸ್ತೀರ್ಣವಿದ್ದು, 47 ಬ್ಲಾಕ್‍ಗಳಾಗಿ ವಿಭಜಿಸಲಾಗಿದೆ. ಯೋಗಾಭ್ಯಾಸ ಮಾಡುವವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗಿದೆ.
ರಬ್ಬರ್ ಯೋಗ ಮ್ಯಾಟ್‍ನ ಬದಲು ಈ ಬಾರಿ ಖಾದಿಯ ಯೋಗ ಮ್ಯಾಟ್‍ಗಳನ್ನು ಬಳಸಲಾಗುತ್ತದೆ. "ಹೃದಯಕ್ಕಾಗಿ ಯೋಗ" ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ.
ಪ್ರಧಾನ ಸಮಾರಂಭದಲ್ಲಿ ಹಲವು ರಾಜ್ಯಗಳ ಪ್ರತಿನಿಧಿಗಳು, ವಿವಿಧ ಯೋಗ ಕೇಂದ್ರಗಳ ತರಬೇತುದಾರರು ಸೇರಿದಂತೆ 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ರಾಷ್ಟ್ರ ರಾಜಧಾನಿಯಲ್ಲೂ ಅಂತಾರಾಷ್ಟ್ರೀಯ ಯೋಗ ದಿನವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಪ್ರಧಾನ ಸಮಾರಂಭ ರಾಜ್‍ಪಥ್‍ನಲ್ಲಿ ನಡೆಯಲಿದೆ. 
2014, ಡಿಸೆಂಬರ್ 11ರಂದು ವಿಶ್ವಸಂಸ್ಥೆ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ. ಯೋಗ ಸಾರ್ವತ್ರಿಕ ಮನ್ನಣೆ ಗಳಿಸಿದ ಬಳಿಕ ವಿಶ್ವಸಂಸ್ಥೆ ಈ ಘೋಷಣೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com