ಹೊಸಕೆರೆ ಹಳ್ಳಿ ಕೆರೆ ಕೋಡಿ ಒಡೆದು ಜಲಾವೃತಗೊಂಡ ಬಡಾವಣೆಗಳು; ಮೇಯರ್, ಆಯುಕ್ತರ ಭೇಟಿ, ಪರಿಶೀಲನೆ 

ರಾಜರಾಜೇಶ್ವರ ನಗರ ವಾರ್ಡ್ ನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹೊಸಕೆರೆಹಳ್ಳಿ ಕೆರೆಯ ಕೋಡಿ ಒಡೆದಿದ್ದು, ಸಮೀಪದ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಯ ರಸ್ತೆಗಳಿಗೆ ನೀರು ಹರಿದಿದ್ದು, ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ.
ಹೊಸಕೆರೆ ಹಳ್ಳಿ ಕೆರೆ ಕೋಡಿ ಒಡೆದು ಜಲಾವೃತಗೊಂಡ ಬಡಾವಣೆಗಳು; ಮೇಯರ್, ಆಯುಕ್ತರ ಭೇಟಿ, ಪರಿಶೀಲನೆ
ಹೊಸಕೆರೆ ಹಳ್ಳಿ ಕೆರೆ ಕೋಡಿ ಒಡೆದು ಜಲಾವೃತಗೊಂಡ ಬಡಾವಣೆಗಳು; ಮೇಯರ್, ಆಯುಕ್ತರ ಭೇಟಿ, ಪರಿಶೀಲನೆ

ಬೆಂಗಳೂರು: ರಾಜರಾಜೇಶ್ವರ ನಗರ ವಾರ್ಡ್ ನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹೊಸಕೆರೆಹಳ್ಳಿ ಕೆರೆಯ ಕೋಡಿ ಒಡೆದಿದ್ದು, ಸಮೀಪದ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಯ ರಸ್ತೆಗಳಿಗೆ ನೀರು ಹರಿದಿದ್ದು, ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ.

60 ಎಕರೆ ವಿಸ್ತೀರ್ಣದ ಹೊಸಕೆರೆ ಹಳ್ಳಿ ಕೆರೆಯನ್ನು ಬಿಡಿಎ ಮತ್ತು ಬಿಬಿಎಂಪಿ, ಬೆಂಗಳೂರು ದಕ್ಷಿಣ ವಲಯದ ಮಳೆ ನೀರು ಸಂಗ್ರಹಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಈ ಕೆರೆಗೆ ನಿರ್ಮಿಸಲಾಗಿದ್ದ ಮಣ್ಣಿನ ಗೋಡೆ ಶನಿವಾರ ರಾತ್ರಿ ಒಡೆದು ಹೋಗಿದ್ದು, ತಗ್ಗು ಪ್ರದೇಶದ ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ನೀರು ನುಗ್ಗಿದೆ. ಪರಿಣಾಮ ರಾತ್ರಿ ಇಡೀ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿತ್ತು. 

ಏಕಾಏಕಿ ಕೆರೆ ಒಡೆದು ನೀರು ನುಗ್ಗಿದ ಪರಿಣಾಮ ಕೆರೆಯಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಕೆಮಿಕಲ್ ಕಾರ್ಖಾನೆಗೆ ನೀರು ನುಗ್ಗಿ, ಕಾರ್ಖಾನೆಯ ಡ್ರಮ್ ಹಾಗೂ ಇನ್ನಿತರ ವಸ್ತುಗಳನ್ನು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಕಾಂಪೌಂಡ್ ಕುಸಿದು ಬಿದ್ದಿದೆ. ಕಾರು, ಬೈಕ್ ಸೇರಿದಂತೆ ಇನ್ನಿತರೆ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. 

ವಿಷಯ ತಿಳಿಯುತ್ತಿದ್ದಂತೆಯೇ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಮೇಯರ್ ಗೌತಮ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆರ್.ಆರ್.ನಗರ ವಲಯದ ವಿಶೇಷ ಆಯುಕ್ತರಿಗೆ ಹಾಗೂ ಮುಖ್ಯ ಎಂಜಿನಿಯರ್'ಗೆ ಸೂಚಿಸಿದ್ದಾರೆ. ಅಲ್ಲದೆ, ಕೆರೆ ಅಭಿವೃದ್ಧಿ ಜವಾಬ್ದಾರಿ ಹೊತ್ತ ಬಿಡಿಎ ಅಧಿಕಾರಿಗಳಿಗೆ ಕೆರೆ ಏರಿಯನ್ನು ತಾತ್ಕಾಲಿಕವಾಗಿ ಸರಿಪಡಿಸುವುದಕ್ಕೆ ಆಯುಕ್ತ ಅನಿಲ್ ಕುಮಾರ್ ಅವರು ಸೂಚಿಸಿದ್ದು, ಸೋಮವಾರ ಬಿಡಿಎ ಹಾಗೂ ಬಿಡಬ್ಲ್ಯೂಎಸ್ಎಸ್'ಬಿ ಅಧಿಕಾರಿಗಳ ಸಬೆ ಕರೆದಿದ್ದಾರೆ. 

ಧಾರಾಕಾರ ಮಳೆಗೆ ನಗರದಲ್ಲಿ ಕೆರೆ ಏರಿ ಒಡೆದು ಬಡಾವಣೆಗಳಿಗೆ ನೀರು ನುಗ್ಗಿರುವ ಎರಡನೇ ಘಟನೆ ಇದಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೂ ದೊಡ್ಡ ಬಿದರಕಲ್ಲು ಕೆರೆ ಏರಿ ಇದೇ ರೀತಿ ಹೊಡೆದು ಸುಮಾರು 10ಕ್ಕೂ ಹೆಚ್ಚು ಬಡಾವಣೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com