ಮುಂದುವರೆದ ಆಪರೇಷನ್ ಟೈಗರ್: ಹುಲಿರಾಯನ ಹೆಜ್ಜೆ ಗುರುತು ಪತ್ತೆ, ಶೀಘ್ರದಲ್ಲೇ ಸೆರೆ ಸಾಧ್ಯತೆ

ಇಬ್ಬರು ರೈತರನ್ನು ಬಲಿ ಪಡೆದುಕೊಂಡು ಸಾಕಷ್ಟು ಆತಂಕ ಸೃಷ್ಟಿಸಿರುವ ನರಹಂಕ ಹುಲಿ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹುಲಿರಾಯನ ಹೆಜ್ಜೆಗುರುತುಗಳು ಪತ್ತೆಯಾದ ಹಿನ್ನಲೆಯಲ್ಲಿ ಶೀಘ್ರದಲ್ಲೇ ವ್ಯಾಘ್ರನ ಸೆರೆಹಿಡಿಯುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. 
ಕ್ಯಾಮೆರಾದಲ್ಲಿ ಸೆರೆಸಿಕ್ಕ ನರಹಂತಕ ಹುಲಿ
ಕ್ಯಾಮೆರಾದಲ್ಲಿ ಸೆರೆಸಿಕ್ಕ ನರಹಂತಕ ಹುಲಿ

ಬೆಂಗಳೂರು: ಇಬ್ಬರು ರೈತರನ್ನು ಬಲಿ ಪಡೆದುಕೊಂಡು ಸಾಕಷ್ಟು ಆತಂಕ ಸೃಷ್ಟಿಸಿರುವ ನರಹಂಕ ಹುಲಿ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹುಲಿರಾಯನ ಹೆಜ್ಜೆಗುರುತುಗಳು ಪತ್ತೆಯಾದ ಹಿನ್ನಲೆಯಲ್ಲಿ ಶೀಘ್ರದಲ್ಲೇ ವ್ಯಾಘ್ರನ ಸೆರೆಹಿಡಿಯುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. 

ಕಾರ್ಯಾಚರಣೆ ಮೊದಲ ದಿನವಾದ ಬುಧವಾರ 4 ತಂಡಗಳಲ್ಲಿ ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಹುಲಿ ಕುರುಹುಗಳು ಸಿಗದೆ ಹಿನ್ನಡೆಯುಂಟಾಗಿತ್ತು. 2ನೇ ದಿನವಾದ ನಿನ್ನೆ ಬೆಳಿಗ್ಗೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಬೇಸ್ ಕ್ಯಾಂಪ್ ಬಳಿಯೇ ಹುಲಿ ಹೆಜ್ಜೆಗಳು ಕಂಡು ಬಂದಿತ್ತು. ರವಿ ಎಂಬುವವರಿಗೆ ಸೇರಿದ ಬಾಳೆತೋಟದ ಪಕ್ಕದ ನೀರಳ್ಳದಲ್ಲಿ ಹುಲಿ ನಡೆದುಕೊಂಡು ಹೋಗಿದ್ದು, ವ್ಯಾಘ್ರನ ಹೆಜ್ಜೆ ಗುರುತು ಕಂಡು ರೈತರು ಆತಂಕಕ್ಕೀಡಾಗಿದ್ದಾರೆ. 

ಈ ಹಿನ್ನಲೆಯಲ್ಲಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು, ಜಯಪ್ರಕಾಶ್, ಗೋಪಾಲಸ್ವಾಮಿ ಹಾಗೂ ಗಣೇಶ್ ಆನೆಗಳನ್ನೇರಿ ಪಶು ವೈದ್ಯರು ಹಾಗೂ ಸಿಬ್ಬಂದಿ ಹುಲಿ ಹೆಜ್ಜೆ ಕಂಡ ತೋಡದ ಸುತ್ತ ಕೆಲ ಕಾಲ ಕೂಂಬಿಂಗೆ ನಡೆಸಿದರು. ಬಂಡೀಪುರ ಹುಲಿ ಯೋಜನೆಗೆ ಸೇರಿದ ಎಲ್ಲಾ ವಲಯದ ಅರಣ್ಯಾಧಿಕಾರಿಗಳು ಹಾಗೂ ವಿಶೇಷ ಹುಲಿ ಸಂರಕ್ಷಣಾ ಪಡೆ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಈ ವೇಳೆ ಜೊತೆಗಿದ್ದರು. ನಂತರ ಹುಂಡೀಪುರದ ಮಹೇಂದ್ರ ಎಂಬುವವರಿಗೆ ಸೇರಿದ ತೋಟದ ಬಳಿ ಹುಲಿ ಇದೆ ಎಂಬ ಮಾಹಿತಿ ದೊರೆತು ಅಲ್ಲಿಯೂ ಮಧ್ಯಾಹ್ನ ಮೂರು ಆನೆಗಳೊಂದಿಗೆ ಹುಡುಕಾಟ ನಡೆಸಲಾಯಿತಾದರೂ ಯಾರಿಗೂ ಹುಲಿಯ ದರ್ಶನ ಸಿಗಲಿಲ್ಲ. 

ನರಹಂತಕ ಹುಲಿ ಗಂಡಾ ಅಥವಾ ಹೆಣ್ಣಾ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು ದಾಳಿ ಮಾಡಿದ ಹುಲಿ ಗಂಡು ಎಂದು ಸ್ಪಷ್ಟಪಡಿಸಿದ್ದಾರೆ. 

ಅರಣ್ಯ ಪ್ರದೇಶದಲ್ಲಿ 3 ಗಂಡು ಹಾಗೂ 1 ಹೆಣ್ಣು ಹುಲಿಯಿರುವುದರಿಂದ ಕೆಲ ಗೊಂದಲಗಳು ಸೃಷ್ಟಿಯಾಗಿವೆ ಎಂದು ತಿಳಿಸಿದ್ದಾರೆ.
  
ಹೆಣ್ಣು ಹುಲಿಯನ್ನು ಆಕರ್ಷಿಸುವ ಸಲುವಾಗಿ ಮೂರು ಗಂಡು ಹುಲಿಗಳು ಬೇಟೆಯಾಗುತ್ತಿದ್ದು, ಆಹಾರಕ್ಕಾಗಿ ಹುಡುಕಾಡುತ್ತಿರುವಾಗ ಸಾವುನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಮಾತನಾಡಿ, ದಾಳಿ ಮಾಡಿದ ಹುಲಿ ಗಂಡು. ಈ ಹಿಂದೆ ಹೆಣ್ಣು ಹುಲಿ ಎಂದು ಹೇಳಲಾಗುತ್ತಿತ್ತು. ಆದರೆ, ನಮ್ಮ ಪರಿಶೀಲನೆ ಹಾಗೂ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಚಿತ್ರಗಳನ್ನು ನೋಡಿದರೆ, ಹುಲಿ ಗಂಡೆಂದು ತಿಳಿದುಬಂದಿದೆ. ಹುಲಿ ಅತ್ಯಂತ ಚುರಕಾಗಿರುವುದರಿಂದ ಸೆರೆಯುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಬುಧವಾರ ರಾತ್ರಿ ಮಳೆಯಾಗಿದ್ದು ಮಣ್ಣು ತೇವವಾದ ಹಿನ್ನಲೆಯಲ್ಲಿ ಹುಲಿ ಸ್ಥಳದಿಂದ ಬೇರೆ ಸ್ಥಳಕ್ಕೆ ತೆರಳಿರಬಹುದು. ದಾಳಿ ಮಾಡಿರುವ ಹುಲಿ ಮನುಷ್ಯನನ್ನು ತಿನ್ನುವ ಪ್ರಾಣಿಯಲ್ಲ. ಇಬ್ಬರನ್ನು ಹತ್ಯೆ ಮಾಡಿದ್ದರೂ ಅದು ಮನುಷ್ಯನನ್ನು ತಿಂದಿಲ್ಲ. ಹುಲಿ ಹಿಡಿಯಲು ಹಲವರು ಇಲಾಖೆಗೆ ಸಲಹೆ ನೀಡುತ್ತಿದ್ದಾರೆ. ಆದರೆ, ಈ ಬಗ್ಗೆ ಸಿಬ್ಬಂದಿಗೆ ಉತ್ತಮ ರೀತಿಯ ತಿಳುವಳಿಕೆಗಳಿವೆ. ಪರಿಸ್ಥಿತಿಗೆ ತಕ್ಕಂತೆ ನಾವು ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com