ವೇತನ ಪರಿಷ್ಕರಣೆ ಸರಿಯಿದೆ: ನೌಕರರ ಮುಷ್ಕರ ಸಂಬಂಧ ಎಚ್ಎಎಲ್ ಸಮರ್ಥನೆ

ಸಾರ್ವಜನಿಕ ಸಹಭಾಗಿತ್ವದ ದೇಶದ ಪ್ರಮುಖ ವಿಮಾನ ತಯಾರಕ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್ ಎಎಲ್) ಉದ್ಯೋಗಿಗಳ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ನಡುವಿನ ಬಿಕ್ಕಟ್ಟು ಮುಂದುವರಿದಿದೆ.

Published: 16th October 2019 07:59 AM  |   Last Updated: 16th October 2019 08:01 AM   |  A+A-


accept the 'fair offer' made by it says HAL on Employees Strike

ಎಚ್ಎಎಲ್ ಆಡಳಿತ ಮಂಡಳಿ

Posted By : Srinivasamurthy VN
Source : UNI

ಬೆಂಗಳೂರು: ಸಾರ್ವಜನಿಕ ಸಹಭಾಗಿತ್ವದ ದೇಶದ ಪ್ರಮುಖ ವಿಮಾನ ತಯಾರಕ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್ ಎಎಲ್) ಉದ್ಯೋಗಿಗಳ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ನಡುವಿನ ಬಿಕ್ಕಟ್ಟು ಮುಂದುವರಿದಿದೆ.

ಒಂದೆಡೆ, ನೌಕರರು ಇತರ ರಕ್ಷಣಾ ಸಾರ್ವಜನಿಕ ಸಹಭಾಗಿತ್ವದ ಘಟಕಗಳಲ್ಲಿನ (ಡಿಪಿಎಸ್ ಯು) ಒಪ್ಪಂದದ ಅನುಸಾರ ವೇತನ ಪರಿಷ್ಕರಣೆ ಮಾಡಬೇಕು ಎಂಬ ಹಟಕ್ಕೆ ಬಿದ್ದಿದ್ದರೆ, ಈಗಾಗಲೇ ನೌಕರರಿಗೆ ಗರಿಷ್ಟ ಮಟ್ಟದ ವೇತನ ಪರಿಷ್ಕರಣೆ ನೀಡಲಾಗಿದ್ದು, ಅದನ್ನು ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ ಎಎಲ್ ಸ್ಪಷ್ಟಪಡಿಸಿದೆ. ಸಂಸ್ಥೆ ಶೇ. 9ರಿಂದ ಶೇ. 24ರವರೆಗೆ ವೇತನ ಪರಿಷ್ಕರಣೆಗೆ ಪ್ರಸ್ತಾವನೆ ಮುಂದಿಟ್ಟಿದೆಯಾದರೂ, ನೌಕರರ ಒಕ್ಕೂಟ ಶೇ. 13ರಿಂದ ಶೇ. 35ರವರೆಗೆ ಪರಿಷ್ಕರಣೆಯ ಬೇಡಿಕೆಯಿಟ್ಟಿದೆ. ನೌಕರರ ವೇತನ ಸಮಸ್ಯೆಯನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಆದರೆ, ಈಗಾಗಲೇ ಉದ್ಯೋಗಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಬೇಡಿಕೆಗಳಲ್ಲಿ ಯಾವುದೇ ರಾಜಿಯಿಲ್ಲ, ಎಲ್ಲ ಸನ್ನಿವೇಶಗಳನ್ನು ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಈ ಕಿತ್ತಾಟದಿಂದ ದೇಶದ ರಕ್ಷಣಾ ಇಲಾಖೆಗೆ ತೇಜಸ್ ನಂತಹ ಅತ್ಯುತ್ತಮ ಸಾಮರ್ಥ್ಯದ ಲಘು ಯುದ್ಧ ವಿಮಾನ ಕೊಡುಗೆ ನೀಡಿದ ಎಚ್ ಎಎಲ್ ಸಂಸ್ಥೆಯ ಉತ್ಪಾದನಾ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ದೇಶಾದ್ಯಂತ 9 ಘಟಕಗಳಲ್ಲಿ ಸುಮಾರು 18 ಸಾವಿರ ನೌಕರರು ಕರ್ತವ್ಯದಿಂದ ದೂರವುಳಿದು ಮುಷ್ಕರ ನಡೆಸುತ್ತಿದ್ದಾರೆ. ಉದ್ಯೋಗಿಗಳ ಪ್ರತಿಭಟನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಎಎಲ್ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ಮತ್ತು ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶಕ ವಿ.ಎಂ.ಚಮುಲ, ಉದ್ಯೋಗಿಗಳಿಗೆ ಶೇ. 9ರಿಂದ ಶೇ. 24ವರೆಗೆ ವೇತನ ಪರಿಷ್ಕರಣೆ ಮಾಡಲಾಗಿದೆ. ಸರಾಸರಿ ಶೇ. 17ರಷ್ಟು ವೇತನ ಪರಿಷ್ಕರಣೆಯಾಗಿದ್ದು, ಉದ್ಯೋಗಿಗಳಿಗೆ 16 ಸಾವಿರ ರೂ.ಗಳವರೆಗೆ ವೇತನ ಹೆಚ್ಚಳವಾಗಲಿದೆ ಎಂದರು.

ಸಂಸ್ಥೆ ಕೈಗೊಂಡಿರುವ ಹಾಲಿ ವೇತನ ಪರಿಷ್ಕರಣೆಯಿಂದ ಹಿಂದೆ ಸರಿಯುವುದಿಲ್ಲ. ಹಾಲಿ ಏರಿಕೆ‌ ಮೊತ್ತವು ಸಂಸ್ಥೆಯ ಹಿತದೃಷ್ಟಿಯಿಂದ ಸರಿಯಾಗಿದೆ. ಉತ್ಪಾದನಾ ವೆಚ್ಚ ಏರಿಕೆ ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಮೈಗೂಡಿಸಿಕೊಳ್ಳುವುದು ಸಂಸ್ಥೆಗೆ ಅನಿವಾರ್ಯವಾಗಿದೆ. ಈ ವಿಷಯವನ್ನು ನೌಕರ ವರ್ಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಅಧಿಕಾರಿ ಶ್ರೇಣಿ ರೀತಿ ನೌಕರರಿಗೂ ವೇತನ ಹೆಚ್ಚಳಕ್ಕೆ ಆಗ್ರಹ ಕೇಳಿಬಂದಿದೆ. ಆದರೆ, ಇದು ಸಮಂಜಸ ಅಲ್ಲ. ಹಾಗೂ ನ್ಯಾಯಯುತವೂ ಅಲ್ಲ. ಪ್ರತಿ‌ ಐದು ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.

ಮುಷ್ಕರದಿಂದ ಸಂಸ್ಥೆಗೆ ನಷ್ಟವಾಗದು. ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಸರಿದೂಗಿಸಿಕೊಳ್ಳಲಾಗುವುದು. ಇನ್ನೂ ಮೂರು ವರ್ಷಕ್ಕೆ ಆಗುವಷ್ಟು ಆರ್ಡರ್ ಇರುವುದರಿಂದ ಸಂಸ್ಥೆಗೆ ತೊಂದರೆ ಇಲ್ಲ. ಇನ್‌ಊ ಬೇರೆ ಆರ್ಡರ್ ಸಿಗುವ ಹಂತದಲ್ಲಿದೆ. ಮುಂದಿ ಹತ್ತು ವರ್ಷಕ್ಕೆ ಬೇಕಿರುವಷ್ಟಿಲು ಉತ್ಪಾದನೆ ಯತ್ತ ಸಂಸ್ಥೆ ದೃಷ್ಟಿ ಹರಿಸಿದೆ. ಈಗಲೂ ನಮ್ಮ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬರುವ ನಿರೀಕ್ಷೆ ಇದೆ. ಇದನ್ನು ನೌಕರ ವರ್ಗಕ್ಕೆ ತಿಳಿಸಲಾಗಿದೆ. ಸಂಸ್ಥೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ನೌಕರರಿಗೆ ಸಂಬಳ ನೀಡಲು ಹಣ ಇಲ್ಲವೆಂಬ ಮಾತು ಒಪ್ಪುವಂಥದ್ದಲ್ಲ ಎಂದು ನಿರ್ದೇಶಕರಾದ ವಿ.ಎಂ.ಚಮೋಲಾ ಹಾಗೂ ಸಿ.ಬಿ.ಅನಂತಕೃಷ್ಣನ್ ತಿಳಿಸಿದರು.

ಕಳೆದ ಎರಡು ದಶಕಗಳಲ್ಲಿ ಸಂಸ್ಥೆಯಲ್ಲಿ ಇಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ.ಇದೊಂದು ಸಣ್ಣ ಸಮಸ್ಯೆಯಷ್ಟೇ. ಇದು ಒಂದೆರಡು ದಿನಗಳಲ್ಲಿ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಂಸ್ಥೆಯಲ್ಲಿ ಹಣದ ಕೊರತೆಯಿಲ್ಲ. ಕಳೆದ ಆರೇಳು ತಿಂಗಳಲ್ಲಿ 9,500 ಕೋಟಿ ರೂ. ಬಾಕಿ ಹಣ ಪಾವತಿಯಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಸುಮಾರು 60 ಸಾವರಿ ಕೋಟಿ ರೂ. ಮೌಲ್ಯದ ಕಾರ್ಯಾದೇಶಗಳು ದೊರೆತಿವೆ. ಮೂರು ವರ್ಷಗಳ ನಂತರ ಯೋಜನೆಗಳ ಕುರಿತು ಅನೇಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿವೆ ಎಂದರು. ಕಾರ್ಮಿಕರ ಮುಷ್ಕರದಿಂದ ಸಂಸ್ಥೆಗೆ ಯಾವುದೇ ನಷ್ಟವಾಗುವುದಿಲ್ಲ. ಕೇವಲ ಕೆಲ ಕಾರ್ಮಿಕರು ಮಾತ್ರ ಮುಷ್ಕರದಲ್ಲಿ ತೊಡಗಿದ್ದಾರೆ. ಆದರೆ, ಶೇ.51ರಷ್ಟು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಸಂಸ್ಥೆಯ ಇತಿಹಾಸವನ್ನು ಗಮನಿಸಿದರೆ, ಇಲ್ಲಿನ ಆಡಳಿತ ಮಂಡಳಿ ಮತ್ತು ಕಾರ್ಮಿಕರು ಒಂದು ಕುಟುಂಬದಂತಿದ್ದು, ಅವರು ಶೀಘ್ರದಲ್ಲೇ ಕೆಲಸಕ್ಕೆ ಮರಳಲಿದ್ದಾರೆ ಎಂಬ ವಿಶ್ವಾಸವಿದೆ ಸಿ.ಬಿ.ಅನಂತಕೃಷ್ಣನ್ ಹೇಳಿದರು.

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp