ಕೊಲೆ ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಕ್ಯಾಂಟರ್​ ಚಾಲಕ ಮಹೇಶ್​ ಕುಮಾರ್ ​(35 ವರ್ಷ) ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಭಾನುವಾರ ಬೆಳ್ಳಂಬೆಳಗ್ಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಕ್ಯಾಂಟರ್​ ಚಾಲಕ ಮಹೇಶ್​ ಕುಮಾರ್ ​(35 ವರ್ಷ) ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಭಾನುವಾರ ಬೆಳ್ಳಂಬೆಳಗ್ಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರವೀಣ್ ಅಲಿಯಾಸ್ ಇಟಾಚಿ ಹಾಗೂ ಅಭಿ ಅಲಿಯಾಸ್ ಅಂದ್ರಳ್ಳಿ ಅಭಿ ಅವರ ಕಾಲಿಗೆ ಪೊಲೀಸರು ಕಾವೇರಿಪುರ ಬಳಿ ಇಂದು ಬೆಳಗ್ಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇವರಿಬ್ಬರೂ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಮಹೇಶ್ ಕುಮಾರ್ ಎಂಬಾತನನ್ನು ಸುಂಕದಕಟ್ಟೆಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಏನಿದು ಪ್ರಕರಣ?
ಕೊಲೆ ಪ್ರಕರಣವೊಂದರಲ್ಲಿ ಅಣ್ಣನೊಂದಿಗೆ ಮಹೇಶ್ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಮಹೇಶ್​ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈ ಕೊಲೆ ಪ್ರಕರಣವನ್ನು ಭೇದಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಮಹೇಶ್​ನನ್ನು ಕೊಂದಿದ್ದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಇಂದು ಮುಂಜಾನೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಪ್ರವೀಣ್ ಮತ್ತು ಅಭಿ ಎಂಬ ಯುವಕರು ಮಹೇಶ್​ ಕುಮಾರ್​ನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದರು. ಇದನ್ನು ಪತ್ತೆಹಚ್ಚಿದ ಪೊಲೀಸರು ಕಾಮಾಕ್ಷಿಪಾಳ್ಯದ ಕಾವೇರಿಪುರ ಗುಡ್ಡ ಬಳಿ ಫೈರಿಂಗ್ ನಡೆಸಿದ್ದಾರೆ. ಹಳೇ ವೈಷಮ್ಯ ಹಿನ್ನೆಲೆ ಮಹೇಶ್ ಕೊಲೆ ಮಾಡಲಾಗಿದೆ. ಆರೋಪಿಗಳ ಬಂಧನ ವೇಳೆ ಪೊಲೀಸರ ಮೇಲೆ ದಾಳಿ ನಡೆಸಲಾಗಿದ್ದು, ಪೇದೆ ವಸಂತಕುಮಾರ್ ಕೈಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ. ಹೀಗಾಗಿ, ಆರೋಪಿಗಳ ಮೇಲೆ ಇನ್​ಸ್ಪೆಕ್ಟರ್ ಗೌತಮ್ ಫೈರಿಂಗ್ ನಡೆಸಿದ್ದಾರೆ.

ಆರೋಪಿಗಳಾದ ಅಭಿ ಬಲಗಾಲಿಗೆ, ಪ್ರವೀಣ್ ಎಡಗಾಲಿಗೆ ಗುಂಡು ಬಿದ್ದಿದ್ದು, ಸದ್ಯ ಲಕ್ಷ್ಮೀ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 2014ರಲ್ಲಿ ನಡೆದಿದ್ದ ಸೂರಿ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಸ್ಲಂ ಭರತ್ ಸಹಚರರಾಗಿರೋ ಅಭಿ ಹಾಗೂ ಪ್ರವೀಣ ಮಹೇಶ್ ಕುಮಾರ್ ಜೈಲಿನಿಂದ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದರು. ಹಳೇ ದ್ವೇಷವನ್ನು ತೀರಿಸಿಕೊಳ್ಳಲು ಶುಕ್ರವಾರ ಮಧ್ಯರಾತ್ರಿ ರಸ್ತೆಯಲ್ಲಿ ಅಡ್ಡಹಾಕಿ ಕೊಲೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com