ಫೋನ್ ಕದ್ದಾಲಿಕೆ: ಸತತ 2ನೇ ದಿನವೂ ಅಲೋಕ್ ಕುಮಾರ್ ವಿಚಾರಣೆ: ಮಹತ್ವದ ಮಾಹಿತಿ ಸಂಗ್ರಹ

ದೂರವಾಣಿ ಕದ್ದಾಲಿಕೆ ಪ್ರಕರಣದ ಸಂಬಂಧ ಕೆಎಸ್‌ಆರ್‌ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಅವರನ್ನು 2ನೇ ದಿನವಾದ ಶುಕ್ರವಾರ ಕೂಡ ಸಿಬಿಐ ಅಧಿಕಾರಿಗಳು ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೂರವಾಣಿ ಕದ್ದಾಲಿಕೆ ಪ್ರಕರಣದ ಸಂಬಂಧ ಕೆಎಸ್‌ಆರ್‌ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಅವರನ್ನು 2ನೇ ದಿನವಾದ ಶುಕ್ರವಾರ ಕೂಡ ಸಿಬಿಐ ಅಧಿಕಾರಿಗಳು ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ತೀವ್ರ ವಿಚಾರಣೆ ನಡೆಸಿದ್ದಾರೆ.

ದೊಡ್ಡವರ ಸೂಚನೆಯಂತೆ ಅವರು ಕೊಟ್ಟಿದ್ದ ಫೋನ್ ನಂಬರ್‌ಗಳನ್ನು ಟ್ಯಾಪ್ ಮಾಡಿ ಕೆಳ ಅಧಿಕಾರಿಗಳಿಗೆ ತಲುಪಿಸಲಾಗಿದೆ ಎಂಬ ಹೇಳಿಕೆಯ ಆಧಾರದಲ್ಲಿ  ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಫೋನ್ ಕದ್ದಾಲಿಸುವಂತೆ ಸೂಚಿಸಿದ ರಾಜಕಾರಣಿ ಯಾರು ? ಯಾರ ಉದ್ದೇಶಕ್ಕಾಗಿ ಕದ್ದಾಲಿಸಲಾಗಿದೆ ಮುಂತಾದ ವಿಷಯಗಳ ಮೇಲೆ ತನಿಖೆ ಕೇಂದ್ರೀಕೃತವಾಗಿದೆ.

ಜಾನ್ಸನ್ ಮಾರುಕಟ್ಟೆ ಬಳಿಯ ಮನೆಯಲ್ಲಿ ಕುಟುಂಬದವರಿಗೆ ನಿರ್ಬಂಧ ವಿಧಿಸಿ ಗುರುವಾರ ಬೆಳಿಗ್ಗೆ 9.30 ರಿಂದ ಸಂಜೆವವರೆಗೆ ಅಲೋಕ್ ಕುಮಾರ್ ಅವರನ್ನು ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದದ್ದರು. 

ಶುಕ್ರವಾರ ಕುಮಾರಕೃಪ ಅತಿಥಿ ಗೃಹದಲ್ಲಿ ಮಧ್ಯಾಹ್ನ 12 ರಿಂದ ಅಲೋಕ್‌ಕುಮಾರ್ ಅವರನ್ನು ಸಿಬಿಐನ ಡಿವೈಎಸ್ಪಿ ನೇತೃತ್ವದ 6  ಮಂದಿ ಅಧಿಕಾರಿಗಳ ತಂಡ ವಿಚಾರಣೆಗೊಳಪಡಿಸಿ, ಮಾಹಿತಿ ಸಂಗ್ರಹಿಸಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ಅಲೋಕ್ ಕುಮಾರ್ ಅವರು ಕೆಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ.   

ಪೋನ್ ಟ್ಯಾಪಿಂಗ್‌ಗೆ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದು ನಿಜವೇ? ಯಾವ ಉದ್ದೇಶದಿಂದ ಫೋನ್ ಕದ್ದಾಲಿಕೆ ಮಾಡಲಾಗಿತ್ತು ಸೇರಿದಂತೆ ಹಲವು ಪ್ರಶ್ನೆಗಳಿಗೆ ನಿನ್ನೆಯ ವಿಚಾರಣೆಯಲ್ಲಿ ಅಲೋಕ್ ಕುಮಾರ್ ಸರಿಯಾದ ಉತ್ತರ ನೀಡಿರಲಿಲ್ಲ, ಅಲ್ಲದೆ ಸಮರ್ಪಕ ಮಾಹಿತಿಯೂ ನೀಡರಲಿಲ್ಲ, ಅದಕ್ಕಾಗಿ ಅವರನ್ನು ಮತ್ತೆ ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ನಗರದ ಪೊಲೀಸ್ ಆಯುಕ್ತರ ಅಧಿಕೃತ ನಿವಾಸದಲ್ಲಿ ಫೋನ್ ಕದ್ದಾಲಿಕೆ ನಡೆಸಿ ಆಡಿಯೋ ಮುದ್ರಣ ಮಾಡಿಕೊಂಡಿರುವ ಸುಮಾರು 30 ಜಿಬಿಯಷ್ಟು ಧ್ವನಿಮುದ್ರಣದ ಪೆನ್ ಡ್ರೈವ್‌ಗೆ ಅಧಿಕಾರಿಗಳು ಅಲೋಕ್ ಕುಮಾರ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದರಾದರೂ ಅದು ಪತ್ತೆಯಾಗಿಲ್ಲ ಇಂದಿನ ವಿಚಾರಣೆಯಲ್ಲಿ ಪೆನ್‌ಡ್ರೈವ್ ಎಲ್ಲಿದೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com