ಕಲುಬರಗಿ: ವೈದ್ಯರ ಬಳಿಕ ಇಬ್ಬರು ವೈದ್ಯಕೀಯ ಸಿಬ್ಬಂದಿಯಲ್ಲಿ ವೈರಸ್ ದೃಢ
ಕಲಬುರಗಿ: ಬೆಂಗಳೂರಿನ ಶಿಫಾ ಆಸ್ಪತ್ರೆಯ 32 ವರ್ಷದ ವೈದ್ಯರಲ್ಲಿ ವೈರಸ್ ಖಚಿತಗೊಂಡ ಬಳಿಕ ಇದೀಗ ಮತ್ತಿಬ್ಬರು ವೈದ್ಯಕೀಯ ಸಿಬ್ಬಂದಿಗಳಲ್ಲೂ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ವೈರಸ್ ದೃಢಪಟ್ಟಿರುವ ಇಬ್ಬರೂ ವೈದ್ಯಕೀಯ ಸಿಬ್ಬಂದಿಗಳೂ ಕಲಬುರಗಿ ಆಸ್ಪತ್ರೆಯಲ್ಲಿ ಸಹಾಯಕ ಶುಶ್ರೂಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರು ನರ್ಸ್ ಗಳಲ್ಲಿ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ವಲಯದಲ್ಲಿ ಈ ವರೆಗೂ ಮೂವರು ಸೋಂಕಿಗೆ ಒಳಗಾಗಿದ್ದಾರೆ.
76 ವರ್ಷದ ಕೊರೋನಾ ಪೀಡಿತ ವೃದ್ಧನಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ವೈದ್ಯರಲ್ಲೂ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿತ್ತು. ಇನ್ನು ಇದೀಗ ವೈರಸ್ ಪತ್ತೆಯಾಗಿರುವ ಇಬ್ಬರೂ ನರ್ಸ್ ಗಳು ಮಹಾರಾಷ್ಟ್ರ ಹಾಗೂ ದೆಹಲಿ ಮೂಲದವರಾಗಿದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಸೋಂಕಿತ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದ 42 ವರ್ಷದ ವ್ಯಕ್ತಿಯಲ್ಲಿ ಇದೀಗ ವೈರಸ್ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ.
ಸೋಂಕಿತ ವೈದ್ಯರೊಂದಿಗೆ ಇನ್ನೂ ಮೂವರು ವೈದ್ಯರು ಕರ್ತವ್ಯನಿರ್ವಹಿಸುತ್ತಿದ್ದರು. ಶಿಫಾ ಆಸ್ಪತ್ರೆಯಲ್ಲಿ ಒಟ್ಟು 8 ಮಂದಿ ರೋಗಿಗಳಿದ್ದು, ಇಬ್ಬರು ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದರೆ, ಉಳಿದವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸ್ಥಿತಿ ಗಂಭೀರವಾಗಿರುವುದರಿಂದ ಕೂಡಲೇ ಅವರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ವೈದ್ಯರೇ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ನೀಡಬೇಕಿದೆ. ಇದೀಗ ರೋಗಿಗಳ ಸಂಬಂಧಿಕರನ್ನು ಸ್ಥಳದಿಂದ ತೊರೆಯುವಂತೆ ತಿಳಿಸಲಾಗಿದ್ದು, ಶೀಘ್ರದಲ್ಲಿಯೇ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಆರೋಗ್ಯ ಮುಖ್ಯ ಅಧಿಕಾರಿ ಡಾ.ಬಿಕೆ.ವಿಜೇಂದ್ರ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ