ಎದೆನೋವಿನಿಂದ ರೋಗಿ ಸಾವು: ಜಯದೇವ ಆಸ್ಪತ್ರೆಯಲ್ಲಿ ಮೃತನ ಸಂಬಂಧಿಕರಿಂದ ದಾಂಧಲೆ
ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಂಬಂಧಿಕರು ಜಯದೇವ ಆಸ್ಪತ್ರೆಯ ಗಾಜು ಒಡೆದು ದಾಂಧಲೆ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ತಿಲಕನಗರ ಠಾಣೆ ಪೊಲೀಸರು ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅನ್ಸರ್ ಪಾಷಾ ಎಂಬುವವರಿಗೆ ಎದೆನೋವು ಕಾಣಿಸಿಕೊಳ್ಳುತ್ತಿದ್ದು, ಹಲವು ಬಾರಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಭಾನುವಾರ ಸಂಜೆ ಅನ್ಸರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅನ್ಸರ್ ಪಾಷಾ ಅವರು ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಅನ್ಸರ್ ಪಾಷಾ ಮೃತಪಟ್ಟಿದ್ದಾರೆಂದು ಆಸ್ಪತ್ರೆಯಲ್ಲಿಯೇ ಕೂಗಾಡಿದ್ದರು. ಬಾಗಿಲು ಹಾಗೂ ಕೊಠಡಿಗೆ ಅಳವಡಿಸಿದ್ದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಕುರ್ಚಿ, ಟೇಬಲ್ ಗಳನ್ನು ಎತ್ತಿ ಬಿಸಾಡಿದ್ದಾರೆ.
ಸಂಬಂಧಿಕರು ಬ್ಯಾರಿಕೇಡ್ ಗಳಿಗೆ ಒದ್ದು ಬೀಳಿಸಿದ್ದರು. ಆಸ್ಪತ್ರೆಯಲ್ಲಿ ನಡೆದ ಗಲಾಟೆ ಬಗ್ಗೆಯೂ ದೂರು ನೀಡುವಂತೆ ವೈದ್ಯರಿಗೆ ಹೇಳಿದ್ದೇವೆ. ಈ ಬಗ್ಗೆ ಯಾರಿಂದಲೂ ಇನ್ನೂ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಹೃದಯಶಾಸ್ತ್ರಜ್ಞ ಮತ್ತು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಡಾ.ಸಿ ಎನ್ ಮಂಜುನಾಥ್ ಅವರು, ರೋಗಿಗೆ ಲಘು ಹೃದಯಾಘಾತವಾಗಿದೆ. ಆಸ್ಪತ್ರೆಗೆ ಬಂದ ಕೂಡಲೇ ನಾವು ಚಿಕಿತ್ಸೆ ನೀಡಿದ್ದೇವೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಘಟನೆಗೆ ಸಿಬ್ಬಂದಿಗಳು ಆತಂಕಕ್ಕೊಳಗಾಗಿದ್ದಾರೆ. ಘಟನೆ ಸಂಬಂಧ ನಾವು ಎಫ್ಐಆರ್ ದಾಖಲಿಸುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ