
ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸೇರಿ ಹಲವು ನದಿಗಳು ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು, 2019ರ ಪ್ರವಾಹ ಮರುಕಳಿಸುವಭೀತಿ ಶುರುವಾಗಿದೆ.
ಕೊಯ್ನಾ ಸೇರಿದಂತೆ ಮಹಾರಾಷ್ಟ್ರದ ವಿವಿಧ ಅಣೆಕಟ್ಟುಗಳಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಈಗಲೂ 1.93 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಗದಕ ಜಿಲ್ಲೆಗಳಲ್ಲಿ ನದಿ ನೀರಿನ ಪ್ರಮಾಣ ಅಪಾಯಮಟ್ಟದಲ್ಲಿದ್ದು, 50ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಕೃಷಿ ಭೂಮಿ, 30ಕ್ಕೂ ಹೆಚ್ಚು ಸೇತವೆಗಳು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಅತಿ ಹೆಚ್ಚು ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದು, ಇನ್ನಷ್ಟು ಮಳೆಯಾದರೆ, ಗೋಕಾಕ ಪಟ್ಟಣವೂ ಜವಾವೃತವಾಗುವ ಅಪಾಯ ಎದುರಾಗಿದೆ.
ಯಾದಗಿರಿ ಜಿಲ್ಲೆಯ ಬಸವಸಾಗರ ಅಣೆಕಟ್ಟಿನಿಂದ 2.55ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹಾತಂಕ ಹೆಚ್ಚಿದೆ. ಮಲಪ್ರಭಾ ಅಚ್ಚುಕಟ್ಟಿನಲ್ಲಿ ಮಳೆ ಕಡಿಮೆಯಾದ ಕಾರಣ ಗದಗ ಜಿಲ್ಲೆಯಲ್ಲಿ ಪ್ರವಾಹ ತುಸು ಇಳಿಕೆಯಾಗಿದೆ. ತುಂಗಭದ್ರಾ ಡ್ಯಾಂನಿಂದ 63000 ಕ್ಯುಸೆಕ್ ನೀರು ಹೊರಬಿಡಲಾಗಿದ್ದು, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವೃಂದಾವನ ಗಡ್ಡೆ ಜಲಾವೃತವಾಗಿದೆ. ಪುರಂದರದಾಸರ ಮಂಟಪಕ್ಕೂ ನೀರು ನುಗ್ಗಿದೆ.
ಇದೇ ವೇಳೆ ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ಕೊಡಗು, ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ.
ಈ ನಡುವೆ ಮಲಪ್ರಭಾ ನದಿ ದಂಡೆಗೆ ಭೇಟಿ ನೀಡಿದ ಬೆಳಗಾವಿ ಉಪ ಆಯುಕ್ತ ಎಂ.ಜಿ ಹಿರೇಮಠ್ ಅವರು ಪರಿಸ್ಥಿತಿ ಅವಲೋಕನ ನಡೆಸಿದರು. ಇದೇ ವೇಳೆ ಸುಂಕದಕಟ್ಟಿ ತಾಲೂಕಿನ ನವಿಲುತೀರ್ಥ ಡ್ಯಾಂ ಬಳಿ ತೆರಳಿದ ಅವರು ಒಳ ಹರಿವು ಹಾಗೂ ಹೊರಹರಿವಿನ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು. ಈ ವೇಳೆ ನೀರಿನ ಮಟ್ಟದ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಿದ್ದಾರೆ.
ಘಟಪ್ರಭಾ ನದಿಗೆ ಹಿಡಕಲ್ ಡ್ಯಾಂನಿಂದ 82 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿರುವ ಕಾರಣ ಗೋಕಾಕ ನಗರ ಸೇರಿದಂತೆ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಒಂದು ವೇಳೆ ಪಶ್ಚಿಮ ಘಟ್ಟ ಭಾಗದಲ್ಲಿ ಮತ್ತೆಮಳೆಯಾದರೆ ಕಳೆದ ವರ್ಷದಂತೆ ಈ ಬಾರಿಯೂ ಗೋಕಾಕ ನಗರ ಮತ್ತೆ ಜಲದಿಗ್ಬಂಧನಕ್ಕೆ ಒಳಗಾಗುವ ಆತಂಕ ಎದುರಾಗಿದೆ. ಇನ್ನು ರಾಮದುರ್ಗ ತಾಲೂಕೊಂದರಲ್ಲಿಯೇ 20ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿದೆ. ಮಲಪ್ರಭಾ ಘಟಪ್ರಭ ಪ್ರವಾಹದಿಂದಾಗಿ ಗೋಕಾಕ ಹಾಗೂ ರಾಮದುರ್ಗದ ಹಲವೆಡೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ನದಿ ತೀರದ ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ.
Advertisement