

ಬೆಂಗಳೂರು: ಮುಂಗಾರು ಅಧಿವೇಶನವನ್ನು ಬೆಂಗಳೂರಿನ ವಿಧಾನಸೌಧದಲ್ಲೇ ನಡೆಸಲು ಸ್ಪೀಕರ್ ತೀರ್ಮಾನಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯಾವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸ್ಪೀಕರ್ ಹಾಗೂ ಕಾರ್ಯದರ್ಶಿಗಳ ಜೊತೆ ಸದನವನ್ನು ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಸಿ ಮಾಧುಸ್ವಾಮಿ ಅವರು, ಈ ಬಾರಿ ವಿಧಾನಸೌಧದಲ್ಲೇ ಮುಂಗಾರು ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.ಇದಕ್ಕೆ ಸ್ಪೀಕರ್ ಸಹ ಸಮ್ಮತಿ ನೀಡಿದ್ದಾರೆ. ಕೊರೋನಾ ಮಾರ್ಗಸೂಚಿ ಪಾಲಿಸಿ ಅಧಿವೇಶನ ನಡೆಸಲಾಗುವುದು ಎಂದರು.
ಸದಸ್ಯರು ಕುಳಿತುಕೊಳ್ಳುವ ಆಸನಗಳ ಮಧ್ಯೆ ಪರದೆ ಹಾಕಲಾಗುತ್ತದೆ. ಈ ಬಾರಿ ಅಧಿವೇಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಅಧಿವೇಶನ ವೀಕ್ಷಿಸಲು ಸಾರ್ವಜನಿಕರಿಗೆ ಪಾಸ್ ನೀಡುವುದಿಲ್ಲ. ಪತ್ರಕರ್ತರಿಗೆ ಎರಡು ಗ್ಯಾಲರಿ ಮಾಡಲು ತೀರ್ಮಾನಿಸಲಾಗಿದೆ. ಪ್ರತೀ ಶಾಸಕರಿಗೂ ಫೇಸ್ ಶೀಲ್ಡ್, ಮಾಸ್ಕ್ ನೀಡಲಾಗುವುದು. ಹಿರಿಯ ಅಧಿಕಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿಯಂತಹ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಇರಲಿದೆ. ಇಲಾಖೆಗೆ ಒಬ್ಬ ಅಧಿಕಾರಿ ಮಾತ್ರ ಸದನಕ್ಕೆ ಬರಲು ಅವಕಾಶ ನೀಡಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.