3ನೇ ಬಾರಿಗೆ ಪೊಲೀಸ್ ಪೇದೆ ಜೊತೆ ಪತ್ನಿ ಪರಾರಿ: ಮಂಡ್ಯ ಎಸ್ಪಿಗೆ ಪತಿ ದೂರು

ಪೊಲೀಸ್ ಪೇದೆಯೊಬ್ಬರ ಜೊತೆ ತನ್ನ ಪತ್ನಿ ಪರಾರಿಯಾಗಿದ್ದಾಳೆ. ಆಕೆಯನ್ನು ಹುಡುಕಿಕೊಡಿ, ಪತ್ನಿ ಕರೆದೊಯ್ದಿರುವ ಪೊಲೀಸ್ ಪೇದೆಯ ವಿರುದ್ದ ಕಾನೂನು ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡಿ ಎಂದು ಕೊಳ್ಳೇಗಾಲದ ವ್ಯಕ್ತಿಯೋರ್ವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮಂಡ್ಯ: ಪೊಲೀಸ್ ಪೇದೆಯೊಬ್ಬರ ಜೊತೆ ತನ್ನ ಪತ್ನಿ ಪರಾರಿಯಾಗಿದ್ದಾಳೆ. ಆಕೆಯನ್ನು ಹುಡುಕಿಕೊಡಿ, ಪತ್ನಿ ಕರೆದೊಯ್ದಿರುವ ಪೊಲೀಸ್ ಪೇದೆಯ ವಿರುದ್ದ ಕಾನೂನು ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡಿ ಎಂದು ಕೊಳ್ಳೇಗಾಲದ ವ್ಯಕ್ತಿಯೋರ್ವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ನಾಗರಾಜಪ್ಪಎಂಬುವವರೇ ತನ್ನ ಪತ್ನಿ ಶಿಲ್ಪಾಳನ್ನು, ಮಳವಳ್ಳಿ ತಾಲ್ಲೂಕು ಹಲಗೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹರೀಶ್ ಕರೆದೊಯ್ದಿದ್ದಾರೆ ಎಂದು ದೂರು ನೀಡಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ನಾಗರಾಜಪ್ಪ ಅವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದ. ಆದರೆ, ಪತ್ನಿ ಶಿಲ್ಪಾಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಂಡ್ಯಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಪೊಲೀಸ್ ಕಾನ್ಸ್ಟೇಬಲ್ ಹರೀಶ್ ಆಕೆಯನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ದೂರಿನಲ್ಲೇನಿದೆ?:
ನನ್ನ ಹೆಸರು ನಾಗರಾಜಪ್ಪ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ನಿವಾಸಿ. ಕೊಳ್ಳೇಗಾಲ ಪಟ್ಟಣದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮಕ್ಕಳೊಂದಿಗೆ ವಾಸವಾಗಿದ್ದೆ, ಆದರೆ ಅದೇನಾಯ್ತೋ ಗೊತ್ತಿಲ್ಲ, ನನ್ನ ಹೆಂಡತಿ ಶಿಲ್ಪಾಳನ್ನು ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಎಂಬಾತ ಪಟಾಯಿಸಿಕೊಂಡಿದ್ದಾನೆ. ಅಲ್ಲದೆ, ಆಕೆಯನ್ನು ಗಂಡ ಮತ್ತು ಮಕ್ಕಳಿಂದ ದೂರ ಮಾಡಿ ತನ್ನ ಜೊತೆ ಕರೆದೊಯ್ದಿದ್ದಾನೆಂದು ಪತಿ ನಾಗರಾಜಪ್ಪ ಮಂಡ್ಯ ಎಸ್ಪಿ ಕೆ.ಪರಶುರಾಮ್ ಅವರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾನೆ. ನನ್ನ ಪತ್ನಿಯ ಅಪಹರಣದಿಂದಾಗಿ ನನ್ನ ಕುಟುಂಬ ಇದೀಗ ಬೀದಿಗೆ ಬಿದ್ದಿದೆ. ಹಾಗಾಗಿ, ನನ್ನ ಹೆಂಡತಿಯನ್ನು ಹುಡುಕಿಕೊಟ್ಟು ಆ ಪೇದೆಯಿಂದ  ನನ್ನ ಪತ್ನಿಯನ್ನು ದೂರ ಮಾಡಿಸಿ ಕೊಡಿ ಎಂದು ಹೆಂಡತಿಯನ್ನು ಕಳೆದುಕೊಂಡ ನಾಗರಾಜಪ್ಪ ಮನವಿ ಮಾಡಿದ್ದಾನೆ.

ಈಗಾಗಲೆ ಈ ಸಂಬಂಧವಾಗಿ ನಾಗರಾಜಪ್ಪ ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕರೆದೊಯ್ದ ಪೇದೆ ವಿರುದ್ದ ದೂರು ನೀಡಿದ್ದರೆ ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲವಂತೆ. ಪೇದೆ ಜೊತೆ ಹೋಗಿರೋ ಆಕೆಯೇ ಬಂದು ದೂರು ನೀಡಲಿ, ಹೋಗು ಎಂದು ದಬಾಯಿಸಿ ಕಳಿಸಿದ್ದರಂತೆ. ಇದರಿಂದ ಕಂಗಾಲಾಗಿರುವ ನಾಗರಾಜಪ್ಪ ಮಂಡ್ಯ ಎಸ್ಪಿಗೆ ದೂರು ನೀಡಿದ್ದಾನೆ. ಪತ್ನಿಯನ್ನು ಕರೆದೊಯ್ದಿರೋ ಪೇದೆ ಹರೀಶ್ ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಈ ಸಂಬಂಧದ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದು ಬ್ಲಾಕ್ ಮೇಲ್ ಮಾಡುತ್ತಿದ್ದು, ನನಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ. ನನಗೆ ಇಬ್ಬರು  ಹೆಣ್ಣು ಮಕ್ಕಳಿವೆ. ಹೆಂಡತಿಯನ್ನು ಆತನ ಸೆರೆಯಿಂದ ಬಿಡಿಸಿಕೊಡಿ ಮತ್ತು ಪ್ರಾಣ ಬೆದರಿಕೆ ಹಾಕಿರೋ ಪೇದೆಗೆ ಶಿಕ್ಷೆ ಕೊಡಿಸಿ, ನನಗೆ ನ್ಯಾಯ ದೊರಕಿಸಿಕೊಡುವಂತೆಯೂ ಆತ ಮನವಿ ಮಾಡುತ್ತಿದ್ದಾನೆ.

3ನೇ ಬಾರಿಗೆ ಪರಾರಿ; 
ಹಲವು ವರ್ಷಗಳಿಂದ ಹರೀಶ್ ಮತ್ತು ಶಿಲ್ಪಾ ಜೊತೆ ಅನೈತಿಕ ಸಂಪರ್ಕವಿತ್ತು. ಅಂತೆಯೇ ಈ ಹಿಂದೆಯೂ 2 ಬಾರಿ ಇಬ್ಬರೂ ಕೂಡ ಓಡಿಹೋಗಿದ್ದರು. ಮನೆಯವರ ನ್ಯಾಯಪಂಚಾಯಿತಿಯಿಂದ ಮತ್ತೆ ಮನೆ ಸೇರಿದ್ದ ಶಿಲ್ಪ ಎಂದಿನ ಹಳೇ ಚಾಳಿಯಂತೆಯೇ ಇದೀಗ 3ನೇ ಬಾರಿಗೆ ಪೇದೆ ಹರೀಶ್ ಜೊತೆ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಒಟ್ಟಾರೆ ತನ್ನ ಹೆಂಡತಿಯನ್ನು ಕರೆದೊಯ್ದಿರುವ ಪೊಲೀಸ್ ಪೇದೆಯ ವಿರುದ್ದ ಸಂತ್ರಸ್ಥ ಪತಿಗೆ ಮಂಡ್ಯ ಎಸ್ಪಿ ನ್ಯಾಯ ದೊರಕಿಸಿ ಕೊಡ್ತಾರಾ? ಅಥವಾ ತಮ್ಮ ಇಲಾಖೆಯ ಸಿಬ್ಬಂದಿಯನ್ನು ರಕ್ಷಣೆ ಮಾಡಿಕೊಳ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ವರದಿ - ನಾಗಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com