ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಧುನಿಕ ಹಿಟ್ಲರ್: ವಾಟಾಳ್ ಗುಡುಗು

ಪೊಲೀಸರು ಮಫ್ತಿಯಲ್ಲಿ ತೆರಳಿ ಸುಮಾರು 30 ಸಾವಿರಕ್ಕೂ ಅಧಿಕ ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
Updated on: 

ಬೆಂಗಳೂರು: ಪೊಲೀಸರು ಮಫ್ತಿಯಲ್ಲಿ ತೆರಳಿ ಸುಮಾರು 30 ಸಾವಿರಕ್ಕೂ ಅಧಿಕ ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರನ್ನು ಬಿಟ್ಟು, ತೆಲುಗು, ಮರಾಠಿಗರಿಗೆ ಪಟ್ಟ ಕಟ್ಟುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೋಸಗಾರ. ನಾನು ಕುಟುಂಬಸ್ಥರನ್ನು ಕಳೆದುಕೊಂಡಾಗ ಅಷ್ಟು ನೋವಾಗಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಮಾಡಿದ ಮೋಸದಿಂದ ಅತೀವ ನೋವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಂದ್ ಗೆ ಅನುಮತಿ ಕೇಳಿಲ್ಲ ಎಂಬ ಪೊಲೀಸ್ ಆಯುಕ್ತರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಗರ ಪೊಲೀಸ್ ಆಯುಕ್ತರಿಗೆ ನಾವೇಕೆ ಅನುಮತಿ ಕೇಳಬೇಕು, ಅವರು ಪರ ಭಾಷಿಕರು. ಅವರಿಗೆ ಕನ್ನಡ ಬರುವುದಿಲ್ಲ. ಮೊದಲು ಅವರನ್ನು ವರ್ಗಾವಣೆ ಮಾಡಬೇಕು ಎಂದರು.

ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬುಧವಾರ ಜೈಲ್ ಭರೋ ಚಳುವಳಿಗಾಗಿ ಸಭೆ ಕರೆಯಲಾಗಿದೆ ಎಂದರು.

ಬಿಜೆಪಿ, ಆರ್'ಎಸ್ಎಸ್ ಕನ್ನಡ ವಿರೋಧಿ
ಬಿಜೆಪಿ, ಆರ್ ಎಸ್ ಎಸ್ ಕನ್ನಡ ವಿರೋಧಿಗಳಾಗಿವೆ. ಪೊಲೀಸರು 30 ಸಾವಿರ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ಅವರು ಕಿಡಿಕಾರಿದ್ದಾರೆ. 

ಮುಖ್ಯಮಂತ್ರಿ ಗಳು ರಾಜೀನಾಮೆ ‌ನೀಡಬೇಕು. ಪರಭಾಷಿಗರು ನಗರ ಪೊಲೀಸ್ ಆಯುಕ್ತರಾಗಬಾರದು. ಹೀಗಾಗಿ ಕಮಲ್ ಪಂತ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಹೋರಾಟ ಕುರಿತು ವಿರೋಧ ಪಕ್ಷದ ಪ್ರಮುಖ ನಾಯಕರು ಬಾಯಿಮುಚ್ಚಿಕೊಂಡು ಕುಳಿತಿರುವುದು ಸರಿಯಲ್ಲ. ಈ ಕುರಿತು ಮಾತನಾಡಬೇಕು ಎಂದು ಅವರು ಆಗ್ರಹಿಸಿದ ಅವರು ಕನ್ನಡಕ್ಕಾಗಿ ಎಲ್ಲರೂ ಒಂದಾಗಬೇಕಾಗಿದೆ ಎಂದು ಕರೆ ನೀಡಿದರು.

ಇಂದಿನ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.ಮರಾಠ ಅಭಿವೃದ್ಧಿ ನಿಗಮ ರಚನೆ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದರು‌.

ಇನ್ನು, ಮತ್ತೋರ್ವ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಅವರು ಮಾತನಾಡಿ, ಈ ಹಿಂದಿನ ಯಾರೊಬ್ಬ ಮುಖ್ಯಮಂತ್ರಿಯೂ ಈ ರೀತಿ ನಡೆದುಕೊಂಡಿರಲಿಲ್ಲ. ಬಿಎಸ್ ಯಡಿಯೂರಪ್ಪ ಅವರು ಕನ್ನಡ ಪರ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಓರ್ವ ಮಾರ್ವಾಡಿ ಆಗಿದ್ದು, ಡಿಜಿ, ಐಜಿಪಿ ಅವರು ಕೂಡ ಪರಭಾಷಿಕರಾಗಿದ್ದಾರೆ. ಹೀಗಾಗಿ ಎಲ್ಲರೂ ಒಗ್ಗೂಡಿ ಕನ್ನಡ ಪರ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಪೊಲೀಸರು
ಈ ನಡುವೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತಿದಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಹಲವಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಟಾಳ್ ನಾಗರಾಜ್ ವಶಕ್ಕೆ ಪಡೆಯುವ ಮುನ್ನ ಹಿರಿಯ ಅಧಿಕಾರಿಗಳ ಅನುಮತಿ ಕೇಳಿದ ಪೊಲೀಸರು, ಡಿಸಿಪಿ ಅನುಚೇತ್ ಒಪ್ಪಿಗೆ ನೀಡುತ್ತಿದ್ದಂತೆ ವಾಟಾಳ್​ರನ್ನ ಬಂಧಿಸಿದ್ದಾರೆ. ಪೊಲೀಸ್ ಬಸ್​ ಮೂಲಕ ವಾಟಾಳ್ ಅವರನ್ನು ಮೈಸೂರು ರಸ್ತೆಯ ಸಿಆರ್ ಹೆಡ್ ಕ್ವಾರ್ಟರಸ್​​ಗೆ ತಲುಪಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com