
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುವ ಮತ್ತು ಟ್ರಾಫಿಕ್ ಸಿಗ್ನಲ್'ಗಳಲ್ಲಿ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ತ್ವರಿತವಾಗಿ ಪಟ್ಟಿ ಸಿದ್ಧಪಡಿಸುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಭಿಕ್ಷೆ ಬೇಡುವ ಮತ್ತು ತಿರುಗು ವ್ಯಾಪಾರಿ ಮಕ್ಕಳ ಗುರುತಿಸುವಿಕೆ ಸಮೀಕ್ಷೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ವಲಯಗಳ ಜಂಟಿ ಆಯುಕ್ತರು ಹಾಗೂ ಆಯಾ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ರಾತ್ರಿ 8 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ತಪಾಸಣೆ ನಡೆಸಿ ರಸ್ತೆ, ಪಾದಚಾರಿ ಮಾರ್ಗ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ತಂಗುದಾಣ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಲಗಿರುವವರನ್ನು ಗುರುತಿಸಿ ಪಟ್ಟಿ ಮಾಡಬೇಕೆಂದು ಸೂಚಿಸಿದ್ದಾರೆ.
ಭಿಕ್ಷುಕ ಮತ್ತು ಆಟಿಕೆಗಳನ್ನು ಮಾರಾಟ ಮಾಡುವ ಮಕ್ಕಳು ಹಾಗೂ ಕೊಳಗೇರಿಗಳಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ಇರುವ ಮಕ್ಕಳನ್ನು ಗುರುತಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಕೊಳಗೇರಿಗಳಲ್ಲಿ ಎಷ್ಟು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ? ಎಷ್ಟು ಮಕ್ಕಳು ಮನೆಯಲ್ಲೇ ಇದ್ದಾರೆಂಬ ನಿಖರ ಮಾಹಿತಿ ಸಂಗ್ರಹಿಸಬೇಕು. ಅಂತಹ ಜಾಗಗಳಿಗೆ ಶಿಕ್ಷಕರನ್ನು ಕಳುಹಿಸಿ ಆ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದ್ದಾರೆ.
ನಗರದ ಪಾದಚಾರಿ ಮಾರ್ಗ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ತಂಗುದಾಣ, ಸಬ್ ವೇ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಲಗುವ ಮಕ್ಕಳು, ವಯಸ್ಕರು ಎಲ್ಲಿಂದ ಬಂದಿದ್ದಾರೆ. ಯಾವ ಕಾರಣಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ರಾಜ್ಯದವರು ಹಾಗೂ ಹೊರ ರಾಜ್ಯದಿಂದ ಬಂದವರೆಷ್ಟು ಎಂಬಿತ್ಯಾದಿ ಸಮರ್ಪಕ ಮಾಹಿತಿಯನ್ನು ಛಾಯಾಚಿತ್ರದ ಸಮೇತ ಸಮೀಕ್ಷೆ ನಡೆಸಿ ವರದಿ ಮಾಡಬೇಕು. ಜೊತೆಗೆ ರಾತ್ರಿ ವೇಳೆ ಆಶ್ರಯ ಕಲ್ಪಿಸಲು ಇರುವ ಪಾಲಿಕೆಯ ರಾತ್ರಿ ತಂಗುದಾಣಗಳಲ್ಲಿ ಮಲಗಲು ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.
Advertisement