ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ಕ್ರಮ: ಹಸಿರು ಬಜೆಟ್‌ಗೆ ತಯಾರಿ

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇದಕ್ಕಾಗಿ ಈ ಬಾರಿ ಬಜೆಟ್ ನಲ್ಲಿ ಪರಿಸರ ಬಜೆಟ್ ಅಳವಡಿಸಿಕೊಳ್ಳಲು ತಯಾರಿ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇದಕ್ಕಾಗಿ ಈ ಬಾರಿ ಬಜೆಟ್ ನಲ್ಲಿ ಪರಿಸರ ಬಜೆಟ್ ಅಳವಡಿಸಿಕೊಳ್ಳಲು ತಯಾರಿ ನಡೆಸಿದೆ.

ಹೌದು.. ಭವಿಷ್ಯದ ದಿನಗಳಿಗಾಗಿ ಸುಸ್ಥಿರ ಪರಿಸರ ಕಾಪಾಡಿಕೊಳ್ಳುವ ಜತೆಗೆ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಈ ಬಾರಿ 'ಹಸಿರು ಬಜೆಟ್' ಮಂಡಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಮೂಲಗಳ ಪ್ರಕಾರ ಬಜೆಟ್‌ನ ಒಂದು ಭಾಗವಾಗಿ 'ಹಸಿರು ಬಜೆಟ್' ಮಂಡಿಸುವ ಕುರಿತು ಹಣಕಾಸು ಇಲಾಖೆ ರೂಪುರೇಷೆ ಸಿದ್ಧಪಡಿಸುತ್ತಿದೆ.

'ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಸ್ತಾವ ಸಿದ್ಧಪಡಿಸಿ, ಹಣಕಾಸು ಇಲಾಖೆಗೆ ಸಲ್ಲಿಸಿದೆ. ಅದನ್ನು ಯಾವ ರೀತಿ ಬಜೆಟ್‌ನಲ್ಲಿ ಅಳವಡಿಸಬೇಕು ಎಂಬ ಚಿಂತನೆ ನಡೆದಿದೆ. ಹೊಸದಾಗಿ ರೂಪಿಸುವ ಯೋಜನೆಗಳ ಜಾರಿ ಹಾಗೂ ಪ್ರಸ್ತುತ ಚಾಲ್ತಿಯಲ್ಲಿ ಇರುವ ಯೋಜನೆಗಳಿಂದ ಪರಿಸರದ ಮೇಲೆ ಯಾವ ಪ್ರಮಾಣದಲ್ಲಿ ಹಾನಿಯಾಗುತ್ತದೆ. ನಿರ್ದಿಷ್ಟ ಕಾಮಗಾರಿಯಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುವಂತಿದ್ದರೆ ಏನು ಮಾಡಬೇಕು, ಅನುಷ್ಠಾನದ ಸಮಯದಲ್ಲಿ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬಿತ್ಯಾದಿ ಅಂಶಗಳನ್ನು ಈ ಬಜೆಟ್ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿರುವ ಕರ್ನಾಟಕ ಅರಣ್ಯ, ಪರಿಸರ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೊಗೊಯ್ ಅವರು, ಪರಿಸರ ಬಜೆಟ್ ಸಿದ್ಧತೆಗೆ ಐಐಎಸ್ ಸಿಯ ಪರಿಸರ ವಿಭಾಗ ತಜ್ಞರು ಕೂಡ ಪಾಲ್ಗೊಂಡಿದ್ದಾರೆ. ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಉಪಕ್ರಮಗಳಲ್ಲಿ ಹಸಿರು ಬಜೆಟ್ ಮೊದಲ ಕ್ರಮವಷ್ಟೇ. ಮುಂದಿನ ದಿನಗಳಲ್ಲಿ ಈ ರೀತಿಯ ಬಹಳಷ್ಟು ಉಪಕ್ರಮಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.

ಅಂತೆಯೇ ರಾಜ್ಯಕ್ಕೆ 12 ಸಾವಿರ ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದ್ದು, ಈ ಪೈಕಿ 9 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಅನ್ನು ಗಾಳಿ ಯಂತ್ರ ಮತ್ತು ಸೋಲಾರ್, ಹೈಡಲ್ ಪವರ್ ಯಂತ್ರಗಳಿಂದ ಸಾಧಿಸುವ ಉದ್ದೇಶ ಹೊಂದಲಾಗಿದೆ.  ಇದಲ್ಲದೆ ಕೃಷಿ ವಿಭಾಗದಲ್ಲೂ ಸಾಕಷ್ಟು ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಪೈಕಿ ಜೀವನ ಶೈಲಿಗೆ ಸಿರಿಧಾನ್ಯಗಳ ಅಳವಡಿಕೆ, ಗೋದಿ ಮತ್ತು ಅಕ್ಕಿಗೆ ಬದಲಾಗಿ ಸಿರಿಧಾನ್ಯಗಳ ಬಳಕೆ ಉತ್ತೇಜಿಸುವುದು ಕೂಡ ಹಸಿರು ಬಜೆಟ್ ಭಾಗವಾಗಿದೆ. ಸಿರಿಧಾನ್ಯಗಳ ಬೆಳೆಯಲು ಅತ್ಯಂತ ಕಡಿಮೆ ನೀರಿನ ಅವಶ್ಯಕತೆ ಇರುತ್ತದೆ ಎಂದು ಗೊಗೋಯ್ ಹೇಳಿದರು.

ಟೂಲ್ ಕಿಟ್ ಸಿದ್ಧತೆ
ಅರಣ್ಯ ಇಲಾಖೆ ಕೆಲವು ಮಾನದಂಡಗಳನ್ನು (ಟೂಲ್ ಕಿಟ್) ಸಿದ್ಧಪಡಿಸಿದ್ದು, ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಅಧ್ಯಯನ ಮಾಡಲಾಗುತ್ತದೆ. ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಕೆಂಪು, ಹಳದಿ, ಹಸಿರು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಗುರುತು ಮಾಡಲಾಗುತ್ತದೆ. ಸಂಬಂಧಿಸಿದ ಯೋಜನೆ ಯಾವ ಬಣ್ಣದ ವ್ಯಾಪ್ತಿಗೆ ಬರುತ್ತದೆ (ಪರಿಸರದ ಮೇಲಿನ ಹಾನಿಯನ್ನು ಅಂದಾಜಿಸುವುದು), ಅದನ್ನು ಜಾರಿಮಾಡಬೇಕೆ? ಬೇಡವೆ? ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com