ಯುವತಿಗೆ ಲೈಂಗಿಕ ಕಿರುಕುಳ: ಕೆಎಸ್ಆರ್'ಟಿಸಿ ಬಸ್ ನಿರ್ವಾಹಕ ಬಂಧನ
ಬೆಂಗಳೂರು: ಚಲಿಸುತ್ತಿದ್ದ ಬಸ್ ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೆಎಸ್ಆರ್'ಟಿಸಿ ಬಸ್ ನಿರ್ವಾಹಕನಿಗೆ ಯುವತಿಯ ಸಂಬಂಧಿಕರು ಥಳಿಸಿ ಸುಬ್ರಹ್ಮಣ್ಯನಗರ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಇಸುಬು ಆಲಿ ತಲ್ಲೂರ(40) ಬಂಧಿತ ನಿರ್ವಾಹಕ. ಬಂಧನಕ್ಕೆ ಒಳಗಾಗುತ್ತಿದ್ದಂತೆ ಆರೋಪಿಯನ್ನು ಕೆಎಸ್ಆರ್'ಟಿಸಿ ಸಂಸ್ಥೆ ಅಮಾನತುಗೊಳಿಸಿದೆ. ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಡಿಪೋಗೆ ಸೇರಿದ ಕೆಎಸ್ಆರ್'ಟಿಸಿ ಬಸ್ ನಲ್ಲಿ ನಿರ್ವಾಹಕನಾಗಿದ್ದ.
ಕತ್ರಿಗುಪ್ಪೆ ನಿವಾಸಿ ಸಂತ್ರಸ್ತ ಯುವತಿ ಫೆ.15ರಂದು ಹಾಸನಕ್ಕೆ ತೆರಳಲು ಕೆಎಸ್ಆರ್'ಟಿಸಿ ಬಸ್ ಹತ್ತಿದ್ದಳು. ಮಾರ್ಗ ಮಧ್ಯೆ ಆರೋಪಿಟಿಕೆಟ್ ಕೊಡುವ ನೆಪದಲ್ಲಿ ಸಂತ್ರಸ್ತೆ ಪಕ್ಕದಲ್ಲಿ ಕುಳಿತುಕೊಂಡು ಆಕೆ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ್ದ. ಆರೋಪಿ ವರ್ತನೆಯಿಂದ ಬೇಸತ್ತ ಯುವತಿ ಆತನಿಗೆ ತಿಳಿಯದಂತೆ ಮೊಬೈಲ್ ನಲ್ಲಿ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದಳು.
ಇದನ್ನು ಗಮನಿಸಿದ ಆರೋಪಿ ಯುವತಿಯಿಂದ ಮೊಬೈಲ್ ಕಸಿಯಲು ಯತ್ನಿಸಿದ್ದ. ಈ ವೇಳೆ ಯುವತಿ ನಿರ್ವಾಹಕನಿಗೆ ಕಪಾಳಮೋಕ್ಷ ಮಾಡಿ ಬೆಳ್ಳೂರು ಕ್ರಾಸ್ ಬಳಿ ಬಸ್ ಇಳಿದು ಮತ್ತೊಂದು ಬಸ್ ನಲ್ಲಿ ಯುವತಿ ಹಾಸನಕ್ಕೆ ತೆರಳಿದ್ದಳು. ವಿಷಯ ತಿಳಿದ ಯುವತಿ ಸಂಬಂಧಿಕರು ಯಶವಂತಪುರ ಬಸ್ ನಿಲ್ದಾಣದಲ್ಲಿ ನಿರ್ವಾಹಕನಿಗೆ ಥಳಿಸಿ ಸುಬ್ರಹ್ಮಣ್ಯ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಯುವತಿ ಕೃತ್ಯದ ವಿಡಿಯೋವನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ